
Sidlaghatta : ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯ 1980 – 81 ರ ಬ್ಯಾಚ್ ವಿದ್ಯಾರ್ಥಿಗಳು ಒಗ್ಗೂಡಿ, 43 ವರ್ಷಗಳ ನಂತರ ತಮ್ಮ ಬದುಕನ್ನು ರೂಪಿಸಿದ ಶಾಲೆ ಹಾಗೂ ಸರ್ಕಾರಿ ಪಿಯು ಕಾಲೇಜಿನ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.
ವಿಶೇಷವೆಂದರೆ ಸರ್ಕಾರಿ ಪ್ರೌಢಶಾಲೆಯ 1980 – 81 ರ ಬ್ಯಾಚ್ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಹರಡಿದ್ದಾರೆ, ಬದುಕನ್ನು ರೂಪಿಸಿಕೊಂಡಿದ್ದಾರೆ. ಅವರೆಲ್ಲರೂ ಒಗ್ಗೂಡಿ 43 ವರ್ಷಗಳ ಹಿಂದೆ ತಮ್ಮ ಜೀವನದ ಗತಿ ಬದಲಿಸಿದ್ದ ಶಾಲೆ, ಕಾಲೇಜು, ಪ್ರಾಂಶುಪಾಲ ಪಿ.ಎಸ್.ರವೀಂದ್ರನಾಥ್, ಸೇರಿದಂತೆ ಶಿಕ್ಷಕರಾದ .ನಾರಾಯಣಪ್ಪ, ಪ್ಯಾರೀ ಭಿ ಮುಂತಾದವರನ್ನು ನೆನೆದರು. ಹಳೆಯ ಮಧುರ ನೆನಪುಗಳನ್ನು ಮೆಲುಕುಹಾಕಿದರು. ಈಗಾಗಲೇ ನಿವೃತ್ತಿಯ ಹೊಸ್ತಿಲಿಗೆ ಬಂದು ನಿಂತಿರುವ ಎಲ್ಲರೂ (ಎಲ್ಲರೂ 58- 60 ರ ಆಸುಪಾಸಿನವರೇ), ತಮ್ಮ ಬದುಕನ್ನು ರೂಪಿಸಿದ ಸರ್ಕಾರಿ ಪ್ರೌಢಶಾಲೆಯ ಋಣ ತೀರಿಸುವ ಬಗ್ಗೆ ಚರ್ಚಿಸಿದರು. ಮುಂದಿನ ದಿನಗಳಲ್ಲಿ ಶಾಲೆಯ ಅಗತ್ಯತೆಗಳನ್ನು ತಿಳಿದುಕೊಂಡು, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ, ಮೂಲಭೂತ ಸೌಕರ್ಯಗಳನ್ನು ಉನ್ನತಿಕರಿಸುವ ಕೆಲಸವನ್ನು ಇನ್ನಷ್ಟು ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡು ಕಾರ್ಯಕ್ರಮ ರೂಪಿಸಲು ಪಣತೊಟ್ಟರು.
ಶಿಡ್ಲಘಟ್ಟದ ಪ್ರೌಡಶಾಲೆಯ ಹಳೆಯ ವಿದ್ಯಾರ್ಥಿಗಳು ಬೆಂಗಳೂರಿನ ತಾಜ್ ಹೋಟೆಲಿನಲ್ಲಿ ಭಾನುವಾರ ಆಯೋಜಿಸಿದ್ದ “ಸ್ನೇಹಕೂಟ ಸಮ್ಮಿಲನ” ಕಾರ್ಯಕ್ರಮವು ಶಿಡ್ಲಘಟ್ಟದ ಪ್ರೌಢಶಾಲೆಯ ಅಭಿವೃದ್ಧಿಯೆಡೆಗೆ ತೊಡಗಿಸಿಕೊಳ್ಳುವಲ್ಲಿ ಅವರೆಲ್ಲರನ್ನೂ ಪ್ರೇರೇಪಿಸಿತು.
“ಹಳೆಯ ಶಾಲಾ ದಿನಗಳ ಮಧುರ ನೆನಪುಗಳು ಪುಂಖಾನುಪುಂಖವಾಗಿ ತೇಲಿಬಂದು ಕೆಲ ಗಂಟೆಗಳ ಕಾಲ ನಾವು 80ರ ದಶಕಕ್ಕೆ ಹೋಗಿದ್ದೆವು. ಪರಸ್ಪರ ಹಾಸ್ಯ ಚಟಾಕಿ, ಶಿಕ್ಷಕರ ಮತ್ತು ಸಹಪಾಠಿಗಳ ನೆನಪು, ಆಗ ಅನುಭವಿಸಿದ್ದ ಪಡಿಪಾಟಲು, ಕಷ್ಟಕೋಟಲೆಗಳ ನಡುವೆಯೂ ಪಟ್ಟುಬಿಡದೆ ಕಲಿತ ಬಗೆ, ಹತ್ತಾರು ಪ್ರಸಂಗಗಳ ಬಗ್ಗೆ ಮಿತ್ರರು ಹಂಚಿಕೊಂಡಿದ್ದು ನಿಜಕ್ಕೂ ಅವಿಸ್ಮರಣೀಯ.
ನಮಗೆ ಜೀವನದ ಪಾಠ ಕಲಿಸಿದ ಶಾಲೆಯ ಇಂದಿನ ಪರಿಸ್ಥಿತಿಯ ಬಗ್ಗೆಯೂ ಸ್ನೇಹಿತರು ಕಳವಳ, ಆತಂಕ ವ್ಯಕ್ತಪಡಿಸಿ ಎಲ್ಲರೂ ಸೇರಿ ಏನಾದರೂ ರಚನಾತ್ಮಕ ಕ್ರಮ ಕೈಗೊಳ್ಳಲು ಸಲಹೆ ಮೂಡಿಬಂತು. ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಮೂವರು ಹಿರಿಯ ಮಿತ್ರರನ್ನೂ ಸನ್ಮಾನಿಸುವ ಭಾಗ್ಯ ನಮ್ಮದಾಯಿತು. ಈ ಅಪರೂಪದ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಚನ್ನಕೇಶವ್, ತ್ಯಾಗರಾಜ್, ಸಾವಿತ್ರಿ, ಸುರೇಶ್ ,ಕೆಂಪಣ್ಣ ಮೊದಲಾದವರ ಪ್ರಯತ್ನ ಸ್ಮರಣೀಯ” ಎಂದು ಹಿರಿಯ ಪತ್ರಕರ್ತ ಪ್ರಕಾಶ್ ಚಂದ್ರ ತಿಳಿಸಿದರು.
“ಸೌದಿ ಅರೇಬಿಯಾದ ತೈಲ ಸಂಸ್ಥೆಯಲ್ಲಿ ಉನ್ನತ ಹುದ್ದೆ ಮತ್ತು ಮೈಸೂರಿನಲ್ಲಿ ಪ್ರತ್ಯೇಕ ಉದ್ಯಮ ಹೊಂದಿರುವ ಚನ್ನಕೇಶವ, ಪಂಚಗಿರಿ ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯಂ, ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ವೆಂಕಟೇಶ, ನಮ್ಮೆಲ್ಲರನ್ನೂ ಒಂದೆಡೆ ಸೇರಿಸುವಲ್ಲಿ ಶ್ರಮಿಸಿದ ಅಪ್ರತಿಮ ಸಂಘಟಕಿ- ಗೃಹಿಣಿ ಸಾವಿತ್ರಿ, ಚೀನಾದ ಸಿಮ್ ಕಾರ್ಡ್ ಕಂಪೆನಿ ನಿರ್ದೇಶಕ ಸುರೇಶ್ ಬಾಬು ಅಯ್ಯರ್, ಹೋಟೆಲು ಉದ್ಯಮಿ ರಾಘವೇಂದ್ರ ಭಟ್, ಕೃಷಿ ಅಧಿಕಾರಿ ಹೇಮಂತ್, ಪಶುವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಜೆಡಿಎಸ್ ಮುಖಂಡ ಲಕ್ಷ್ಮೀನಾರಾಯಣ, ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ ತ್ಯಾಗರಾಜ್, ಶಿಕ್ಷಕಿ ಉಮಾ, ಉಪನ್ಯಾಸಕ ಜೆ.ವಿ.ರಾಮಚಂದ್ರ, ಜುವಾರಿ ಕಂಪೆನಿಯ ಅಧಿಕಾರಿ ಬಿ.ಎಸ್.ರಘು, ಪಿಎಲ್ ಡಿ ಬ್ಯಾಂಕ್ ನಿವೃತ್ತ ಅಧಿಕಾರಿ ಗೋಪಾಲ್, ಶಿಕ್ಷಕಿ ಎಸ್. ಆರ್ ಶೈಲಜಾ, ಕೆಂಪಣ್ಣ ಮುಂತಾದ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡವರೆಲ್ಲಾ ಒಂದೆಡೆ ಕಲೆತಿದ್ದೆವು” ಎಂದು ಪತ್ರಕರ್ತ ಪ್ರಕಾಶ್ ಚಂದ್ರ ಹೇಳಿದರು.