
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನ NSS ಘಟಕದಿಂದ ಏಳು ದಿನಗಳ ವಿಶೇಷ ಶಿಬಿರದಲ್ಲಿ ಬೆಂಕಿ ದುರಂತಗಳನ್ನು ಎದುರಿಸುವ ಬಗ್ಗೆ ಶಿಬಿರಾರ್ಥಿಗಳಿಗೆ ಅರಿವು ಮೂಡಿಸಿ ಶಿಡ್ಲಘಟ್ಟದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಜಿ.ಅಶೋಕ್ ಅವರು ಮಾತನಾಡಿದರು.
ಬೆಂಕಿ, ವಿದ್ಯುತ್ ದುರಂತಗಳು ಸಂಭವಿಸಿದಾಗ ಧೈರ್ಯ ಕಳೆದುಕೊಂಡು ಎದೆ ಗುಂದದೆ ಪರಿಸ್ಥಿತಿಯನ್ನು ನಿಭಾಯಿಸುವಂತಾಗಬೇಕು. ಒಮ್ಮೊಮ್ಮೆ ದುರಂತಕ್ಕಿಂತಲೂ ಧೈರ್ಯ ಕಳೆದುಕೊಂಡು ಆತುರ ಬೀಳುವುದರಿಂದಲೆ ಹೆಚ್ಚಿನ ಅನಾಹುತ ಸಂಭವಿಸುತ್ತದೆ ಎಂದು ತಿಳಿಸಿದರು.
ಮನೆಯಲ್ಲಿ ಅನಿಲ ಸೋರಿಕೆ ಅಥವಾ ಬೆಂಕಿ ಅವಘಡಗಳು ನಡೆದಾಗ ಅದರ ಬಗ್ಗೆ ಪೂರ್ಣ ಅರಿವು ಇದ್ದರಷ್ಟೆ ಪರಿಸ್ಥಿತಿಯನ್ನು ಎದುರಿಸುವ ಕೆಲಸಕ್ಕೆ ಮುಂದಾಗಿ ಎಂದರು.
ಈಜಾಡಲು ಕೆರೆ ಕುಂಟೆ ಕಾಲುವೆಗೆ ಇಳಿಯುವ ಮೊದಲು ಅದರ ಆಳ ಅಗಲ ಸೇರಿದಂತೆ ಸಂಪೂರ್ಣ ಮಾಹಿತಿ ಇದ್ದರಷ್ಟೆ ಈಜಲು ಇಳಿಯಿರಿ ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಲಹೆ ನೀಡಿದರು.
ಅನಿಲ ಸೋರಿಕೆ ಆದಾಗ ಮತ್ತು ಬೆಂಕಿ ಅವಘಡಗಳು ನಡೆದಾಗ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ವಿವರಿಸಿದರು.
ಅಗ್ನಿ ಅವಘಡಗಳನ್ನು ಎದುರಿಸುವ ಬಗ್ಗೆ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು. ಅಗ್ನಿಶಾಮಕ ಠಾಣಾಧಿಕಾರಿ ಕೆ.ರಾಮಕೃಷ್ಣಪ್ಪ, ವಿನಾಯಕಸ್ವಾಮಿ ಸೇವಾ ಅಭಿವೃದ್ದಿ ಟ್ರಸ್ಟ್ ನ ಅಧ್ಯಕ್ಷ ಸಿ.ರಾಮು, ಮುಖ್ಯ ಶಿಕ್ಷಕ ಶ್ರೀನಿವಾಸ್, ಶಿಬಿರಾಧಿಕಾರಿ ಮುನಿರಾಜು, ಅಗ್ನಿಶಾಮಕ ಸಿಬ್ಬಂದಿ ಆನಂದಪ್ಪ, ಗುರುನಾಥ್, ರೇವಣ್ಣ ಹಾಜರಿದ್ದರು.





Join Telegram







