![](https://chikkaballapur.com/wp-content/uploads/2023/02/23FEB23Sd2a.jpg)
Sidlaghatta : ನಗರಕೇಂದ್ರಿತವಾಗಿರುವ ಕಾಲೇಜಿನ ಹೆಣ್ಣುಮಕ್ಕಳಿಗೆ ಗ್ರಾಮೀಣ ದರ್ಶನ ಮಾಡಿಸುವ ಜೊತೆಗೆ ಮಣ್ಣಿನ ಸೊಗಡಿನಲ್ಲಿ ಅರಳುವ ಮಹಿಳಾ ಶಕ್ತಿಯನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಮೌಂಟ್ ಕಾರ್ಮೆಲ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಕಲಾವತಿ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆ ಹಾಗೂ ಆನೂರು ಗ್ರಾಮ ಪಂಚಾಯಿತಿ ಮತ್ತು ಹಿತ್ತಲಹಳ್ಳಿ ಗ್ರಾಮಕ್ಕೆ ಗುರುವಾರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ತಮ್ಮ 140 ಮಂದಿ ವಿದ್ಯಾರ್ಥಿನಿಯರ ತಂಡದೊಂದಿಗೆ ಭೇಟಿ ನೀಡಿದ್ದ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಮಹಿಳಾ ಸಬಲೀಕರಣ, ಹೆಣ್ಣುಮಕ್ಕಳು ಕೃಷಿ, ಹೈನುಗಾರಿಕೆ, ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಹಾಗೂ ಆಡಳಿತದಲ್ಲಿಯೂ ಅವರ ಜವಾಬ್ದಾರಿಗಳು, ಕೃಷಿಯ ಸಾಧ್ಯತೆಗಳು ಪರಿಚಯಿಸುವುದು ನಮ್ಮ ಮುಖ್ಯ ಉದ್ದೇಶ. ಇದರೊಂದಿಗೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ಮತ್ತು ಶಾಲೆಗೆ ಎರಡು ಫ್ಯಾನ್ ಗಳನ್ನು ನಮ್ಮ ವಿದ್ಯಾರ್ಥಿನಿಯರಿಂದ ಕೊಡಿಸುವ ಮೂಲಕ ಅವರಿಗೆ ಸಾಮಾಜಿಕ ಕಾಳಜಿಯನ್ನು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ 140 ಮಂದಿ ವಿದ್ಯಾರ್ಥಿನಿಯರ ತಂಡ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಭೇಟಿ ನೀಡಿ, ಉಪನಿರ್ದೇಶಕ ಅಮರನಾಥ್ ಅವರಿಂದ ರೇಷ್ಮೆ ಗೂಡಿನ ಮಾರುಕಟ್ಟೆಯ ವ್ಯವಹಾರದ ಬಗ್ಗೆ, ಗೂಡಿನ ಧಾರಣೆ ಬಗ್ಗೆ ಮಾಹಿತಿ ಪಡೆದರು.
ಆನೂರು ಗ್ರಾಮ ಪಂಚಾಯಿತಿಗೆ ತೆರಳಿದ ವಿದ್ಯಾರ್ಥಿನಿಯರು ಪಿಡಿಒ ಕಾತ್ಯಾಯಿನಿ ಅವರಿಂದ ಗ್ರಾಮ ಪಂಚಾಯಿತಿಗೆ ಬರುವ ಅನುದಾನಗಳು, ಅದರ ಬಳಕೆ, ಸದಸ್ಯರು, ಗ್ರಾಮಗಳು, ನರೇಗಾ ಯೋಜನೆಯ ವಿವರ, ಹಣಕಾಸಿನ ಹಂಚಿಕೆ ಕುರಿತು ಮಾಹಿತಿ ಪಡೆದುಕೊಂಡರು.
ತಾಲ್ಲೂಕಿನ ಹಿತ್ತಲಹಳ್ಳಿಗೆ ಭೇಟಿ ನೀಡಿದ ವಿದ್ಯಾರ್ಥಿನಿಯರು ಅಲ್ಲಿನ ವಿನೂತನ ಸೌರಶಕ್ತಿ ಬಳಕೆ ಮಾಡಿರುವ ಶುದ್ಧ ನೀರಿನ ಘಟಕ, ಬಣ್ಣ ಬಣ್ಣದ ಸುಂದರ ಚಿತ್ರಗಳಿಂದ ಸಿಂಗಾರಗೊಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡರ ಸಮಗ್ರ ಕೃಷಿ ಪದ್ಧತಿಯನ್ನು ವೀಕ್ಷಿಸಿ ಮಾಹಿತಿ ಪಡೆದರು.
ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯರು ಹಿತ್ತಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಮತ್ತು ಶಾಲೆಗೆ ಎರಡು ಫ್ಯಾನ್ ಗಳನ್ನು ನೀಡಿದರು.
ಸಮಾಜಶಾಸ್ತ್ರ ಉಪನ್ಯಾಸಕರಾದ ಸೋಫಿಯಾ ಶರಣ್, ವರ್ಷಾಲಿ. ರಾಜ್ಯಶಾಸ್ತ್ರ ತಿರುಮಲೇಶ್, ರೈತರಾದ ಹಿತ್ತಲಹಳ್ಳಿ ಗೋಪಾಲಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ರಾಮಮೂರ್ತಿ, ಕಾಚಹಳ್ಳಿ ರತ್ನಮ್ಮ, ಶೈಲಜ, ಹೊಸೂರು ಮುರಳಿ, ರಾಜಣ್ಣ, ವಿಜಯೇಂದ್ರ ಹಾಜರಿದ್ದರು.