Jangamakote, Sidlaghatta : ಮಲೆನಾಡಿನ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿದ್ದು ಜಗತ್ತಿನ ಎಲ್ಲಾ ವಿಷಯಗಳಿಗೂ ತಮ್ಮ ಬರಹದ ಮೂಲಕ ಪ್ರತಿಕ್ರಿಯಿಸುತ್ತಿದ್ದವರು ಪೂರ್ಣಚಂದ್ರ ತೇಜಸ್ವಿ. ಅವರ ಬರಹ ಮತ್ತು ಬದುಕಿನ ನಡುವೆ ಅಂತರವಿಲ್ಲದಿರುವುದರಿಂದ ಅವರನ್ನು ಬಹಳಷ್ಟು ಯುವ ಸಮುದಾಯ ಇಷ್ಟ ಪಡುತ್ತಾರೆ. ಅವರ ಎಲ್ಲಾ ಕೃತಿಗಳಲ್ಲಿನ ಪರಿಸರ ಕಾಳಜಿ, ವೈನೋದಿಕ ವಿಡಂಬನೆ ಮತ್ತು ಚಿಕಿತ್ಸಕ ದೃಷ್ಟಿ ವಿಶಿಷ್ಟವಾದದ್ದು ಎಂದು ಶಿಕ್ಷಕ ಮುರಳಿಮೋಹನ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದ ನೆನಪಿನ “ಪೂರ್ಣಚಂದ್ರ ದರ್ಶನ” ಎಂಬ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ತೇಜಸ್ವಿಯವರ ಬದುಕು ಬರಹಗಳನ್ನು ದೃಶ್ಯ ಮತ್ತು ಅಕ್ಷರ ಮಾಧ್ಯಮದಲ್ಲಿ ಪರಿಚಯಿಸುವ ಪ್ರಮುಖ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದು ಹೇಳಿದರು.
ಶಾಲಾ ಸಂಸತ್ ನ ವಿದ್ಯಾರ್ಥಿ ಪ್ರತಿನಿಧಿ ಸಾಜೀದ ಸುಲ್ತಾನ ಮಾತನಾಡಿ, ನಮಗೆ ಪಠ್ಯಪುಸ್ತಕಗಳಲ್ಲಿ ಸಂಕ್ಷಿಪ್ತವಾಗಿ ಲೇಖಕರ ಪರಿಚಯ ನೀಡಿರುತ್ತಾರೆ. ಇಲ್ಲಿ ತೇಜಸ್ವಿಯವರ ಫೋಟೊಗಳು, ಅವರ ಪುಸ್ತಕಗಳು, ಸಾಕ್ಷ್ಯಚಿತ್ರ ಎಲ್ಲವನ್ನು ನೋಡಿ ಹೆಚ್ಚು ಪುಸ್ತಕಗಳನ್ನು ಓದಬೇಕೆಂಬ ಆಸಕ್ತಿ ಉಂಟಾಗುತ್ತಿದೆ ಎಂದು ನುಡಿದರು.
ಪ್ರೌಢಶಾಲಾ ಶಿಕ್ಷಕ ಸಿ.ಬಿ.ಪ್ರಕಾಶ್ ಮಾತನಾಡಿ, ಮೊಬೈಲ್, ಸಾಮಾಜಿಕ ಜಾಲತಾಣಗಳು, ಟಿವಿ ಎಂದು ಓದಿನಿಂದ ವಿಮುಖವಾಗುತ್ತಿರುವ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಸಾಹಿತ್ಯ ಓದಿನಲ್ಲಿ ಆಸಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ ಎಂದರು.
ಶಾಲೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಎಲ್ಲಾ ಪುಸ್ತಕಗಳು ಹಾಗೂ ಅವರ ಅಪರೂಪದ ಫೋಟೋಗಳನ್ನು ಪ್ರದರ್ಶಿಸಲಾಗಿತ್ತು. ತೇಜಸ್ವಿ ಎಂಬ ವಿಸ್ಮಯ ಎಂಬ ಸಾಕ್ಷ್ಯ ಚಿತ್ರವನ್ನು ಮಕ್ಕಳಿಗೆ ತೋರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಕೆ .ಎಸ್. ಭಾಗ್ಯಲಕ್ಷ್ಮಿ, ಶಿಕ್ಷಕರಾದ ಮಂಜುಳ, ಸೌಮ್ಯ ಹೆಗಡೆ, ಬಾಬು, ರಘು, ನಿಖಿತಾ, ತಬಸುಮ್ ಹಾಜರಿದ್ದರು.