Chintamani : ಮಂಗಳವಾರ ಚಿಂತಾಮಣಿ ನಗರದ ಎನ್.ಆರ್.ಬಡಾವಣೆ ಭಗವದ್ಗೀತಾ ವಿದ್ಯಾಮಂದಿರದಲ್ಲಿ ಗೀತಾ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಿ ಗೀತೆಯ 18 ಅಧ್ಯಾಯಗಳ ಶ್ಲೋಕಗಳನ್ನು ಪಠಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗೀತಾ ಪ್ರವಚನಗಾರ್ತಿ ಪ್ರಭಾವತಕ್ಕ “ಭಗವದ್ಗೀತೆ ಹುಟ್ಟಿಕೊಂಡ ದಿನವನ್ನು ಗೀತಾ ಜಯಂತಿಯನ್ನಾಗಿ ಆಚರಿಸಲಾಗುತ್ತದೆ. ಭಗವದ್ಗೀತೆಯಲ್ಲಿ ಮನುಷ್ಯ ನ್ಯಾಯ ನೀತಿಯಿಂದ ಬದುಕಲು ಅವಶ್ಯವಿರುವ ಎಲ್ಲ ಮಾರ್ಗದರ್ಶನ ದೊರೆಯುತ್ತದೆ. ಶ್ರದ್ಧಾ ಭಕ್ತಿಯಿಂದ ಗೀತಾ ಜಯಂತಿಯನ್ನು ಆಚರಿಸುವುದರಿಂದ ಅದರ ಸೃಷ್ಟಿಕರ್ತರಿಗೂ ಮತ್ತು ಕಾವ್ಯಕ್ಕೂ ಗೌರವ ಸಲ್ಲಿಸಿದಂತಾಗುತ್ತದೆ” ಎಂದು ಹೇಳಿದರು.