Chikkaballapur : ರಸ್ತೆ ವಿಸ್ತರಣೆಗೆ ಜಾಗ ಕಳೆದುಕೊಂಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಚರಾಸ್ತಿ ಜಪ್ತಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಲಯವು ಆದೇಶಿಸಿದ್ದು ಬುಧವಾರ ವರ್ತಕರು, ನ್ಯಾಯಾಲಯದ ಇಬ್ಬರು ಸಿಬ್ಬಂದಿ ಬಂದು ಉಪವಿಭಾಗಾಧಿಕಾರಿ ಕಚೇರಿಯ ಕುರ್ಚಿ, ಮೇಜು ಸೇರಿದಂತೆ ಪೀಠೋಪಕರಣಗಳು, ಕಂಪ್ಯೂಟರ್, ಮತ್ತಿತರ ವಸ್ತುಗಳನ್ನು ಕಚೇರಿಯಿಂದ ಹೊರಗೆ (AC Office confiscation) ಇಟ್ಟರು.
2006ರಲ್ಲಿ ಬಾಗೇಪಲ್ಲಿ ಪಟ್ಟಣದ ನ್ಯಾಯಾಲಯದ ಬಳಿಯಿಂದ ನ್ಯಾಷನಲ್ ಕಾಲೇಜುವರೆಗಿನ ಡಿ.ವಿ.ಜಿ ರಸ್ತೆ ವಿಸ್ತರಣೆಗೆ ಅಧಿಸೂಚನೆ ಹೊರಡಿಸಲಾಯಿತು. 2011ರಲ್ಲಿ ಕಟ್ಟಡಗಳ ಮಾಲೀಕರಿಗೆ ಪರಿಹಾರದ ಹಣ ನೀಡಲಾಯಿತು. ಕಟ್ಟಡಗಳ ಮಾಲೀಕರಿಗೆ ಒಂದು ಚದುರ ಅಡಿಗೆ ಅಂದು ₹ 280 ಪರಿಹಾರ ಧನ ನಿಗದಿಪಡಿಸಲಾಗಿತ್ತು. ಆದರೆ 32 ಮಂದಿ ಕಟ್ಟಡಗಳ ಮಾಲೀಕರು ಈ ಪರಿಹಾರದ ಹಣ ಸಾಕಾಗುವುದಿಲ್ಲ ಎಂದು ನ್ಯಾಯಾಲಯದ ಮೊರೆ ಹೋದಾಗ ನ್ಯಾಯಾಲಯವು ಚದುರ ಅಡಿಗೆ ₹ 890 ನಿಗದಿಪಡಿಸಿತು. ಈ ಹಣವನ್ನು ಕಟ್ಟಡಗಳ ಮಾಲೀಕರಿಗೆ ನೀಡಿರಲಿಲ್ಲ ಎಂದು ಕಟ್ಟಡಗಳ ಮಾಲೀಕರು ಮತ್ತೆ ನ್ಯಾಯಾಲಯದ ಮೊರೆ ಹೋದರು.
ಕೆಲ ಸಮಯದ ನಂತರ ಕಟ್ಟಡಗಳ ಮಾಲೀಕರು, ನ್ಯಾಯಾಲಯದ ಸಿಬ್ಬಂದಿ ಮತ್ತು ಉಪವಿಭಾಗಾಧಿಕಾರಿ ನಡುವೆ ಮಾತುಕತೆ ನಡೆಯಿತು. ಒಂದು ತಿಂಗಳ ಒಳಗೆ ಪರಿಹಾರದ ಹಣ ದೊರಕಿಸಿಕೊಡುವುದಾಗಿ ಉಪವಿಭಾಗಾಧಿಕಾರಿ ಭರವಸೆ ನೀಡಿದ ನಂತರ ಪೀಠೋಪಕರಣಗಳನ್ನು ಮೊದಲು ಇದ್ದಂತೆಯೇ ಕಚೇರಿಯೊಳಗೆ ಇರಿಸಲಾಯಿತು.