Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ (Press Meet) ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ( D S Anand Reddy Babu) ಶಾಸಕ ಪ್ರದೀಪ್ ಈಶ್ವರ್ (Pradeep Eshwwar) ರವರ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಶಾಸಕರು ಬೆಂಗಳೂರಿನ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ನಡೆಸಿರುವುದು ತೀರಾ ನಾಚಿಕೆಗೇಡಿನ ವಿಚಾರ. ಶಾಸಕರು ಚಿಕ್ಕಬಳ್ಳಾಪುರದಲ್ಲಿ ಸಭೆ ನಡೆಸದೇ ಬೆಂಗಳೂರಿನಲ್ಲಿ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ. ನಿಯಮಬದ್ಧವಾಗಿ ಅಧಿಕಾರಿಗಳ ಸಭೆಯನ್ನು ಶಾಸಕರು ಮಾಡಿಲ್ಲ. ಮಕ್ಕಳಿಗೆ ಟ್ಯೂಷನ್ ಮಾಡುವ ರೀತಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಲ್ಲಿ ಸಭೆ ನಡೆದಿರುವ ಚಿತ್ರಗಳನ್ನು ನೋಡಿದರೆ ಮಕ್ಕಳು ಪಾಠ ಕೇಳುವ ರೀತಿಯಲ್ಲಿ ಅಧಿಕಾರಿಗಳು ಕುಳಿತಿದ್ದಾರೆ ಎಂದು ಡಿ.ಎಸ್.ಆನಂದರೆಡ್ಡಿ ಬಾಬು ತಿಳಿಸಿದರು.
ನಗರಸಭೆಯ ಸದಸ್ಯರು ಭ್ರಷ್ಟರು ಎಂದು ಶಾಸಕರು ಚಿಕ್ಕಬಳ್ಳಾಪುರ ನಗರಸಭೆಯ ಮಾನ ಹರಾಜು ಹಾಕುತ್ತಿದ್ದಾರೆ. ಭ್ರಷ್ಟಾಚಾರದ ದಾಖಲೆಗಳನ್ನು ಕೊಡಲಿ. ನಾವೇ ಅವರಿಗೆ ಈ ವಿಚಾರವಾಗಿ ಸಾಥ್ ನೀಡುತ್ತೇವೆ. ಆದರೆ ಸುಮ್ಮನೆ ದೂರುವುದು ಸರಿಯಲ್ಲ. ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಗರಸಭೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಕಾಲ ಕಾಲಕ್ಕೆ ಇ–ಖಾತೆಗಳನ್ನು ಸಹ ನೀಡಲಾಗಿದೆ. ಆದರೆ ಶಾಸಕರು ಮಾತ್ರ ಸುಖಾಸುಮ್ಮನೆ ನಗರಸಭೆಯ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಡಿ.ಎಸ್.ಆನಂದರೆಡ್ಡಿ ಬಾಬು ಹೇಳಿದರು.
ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡ ಸಂತೋಷ್ ರಾಜ್ , ನಗರಸಭೆ ಸದಸ್ಯರಾದ ಯತೀಶ್, ಸುಬ್ರಹ್ಮಣ್ಯಾಚಾರಿ, ರುಕ್ಮಿಣಿ ಮುನಿರಾಜು, ಮುಖಂಡರಾದ ಮೊಬೈಲ್ ಬಾಬು, ನಾರಾಯಣಸ್ವಾಮಿ, ಭಾರ್ಗವ್ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.