Sidlaghatta : ಆತ್ಮ ನಿರ್ಭರ ಭಾರತ್ ಅಭಿಯಾನದಡಿ ಕೇಂದ್ರ ಪುರಸ್ಕೃತ ಹಲವು ಯೋಜನೆಗಳು ರೈತರಿಗಾಗಿ ಇವೆ. ಅವುಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ವಿಜಯ್ ತಿಳಿಸಿದರು.
ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ರೈತ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಬೆಳೆ ಸಾಲ, ಬಂಗಾರದ ಅಡವಿನ ಕೃಷಿ ಸಾಲ, ಅಡಮಾನ ಸಾಲ, ಟ್ರಾಕ್ಟರ್, ನೀರಾವರಿ, ಗ್ರಾಮೀಣ ಉಗ್ರಾಣ, ಪಶು ಸಂಗೋಪನೆ, ತೋಟಗಾರಿಕೆ, ಸ್ವಸಹಾಯ ಸಂಘಗಳಿಗೆ ನೀಡುವ ಸಾಲಗಳ ಕುರಿತಾಗಿ ವಿವರಿಸಿದರು.
ಆರ್ಥಿಕ ಸಲಹೆಗಾರ ಕೃಷ್ಣಪ್ಪ ಮಾತನಾಡಿ, ಅಲ್ಪ ಹಣವನ್ನು ಖಾತೆಯಿಂದ ನೀಡುವ ಮೂಲಕ ವಿಮೆ ಮಾಡಿಸುವ ವಿಧಾನ, ಹಣ ಉಳಿತಾಯದ ರೀತಿಗಳು ಮುಂತಾದ ಹಣಕಾಸಿನ ಅಗತ್ಯ ಸಂಗತಿಗಳ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಮರನಾರಾಯಣರೆಡ್ಡಿ, ರೇಷ್ಮೆ ಇಲಾಖೆಯ ನಿರೀಕ್ಷಕ ತಿಮ್ಮಪ್ಪ ತಮ್ಮ ಇಲಾಖೆಗಳಿಂದ ರೈತರಿಗೆ ಸಿಗುವ ಅನುಕೂಲಗಳು ಹಾಗೂ ಬ್ಯಾಂಕ್ ಮೂಲಕ ಪಡೆಯಬಹುದಾದ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣೇಗೌಡ, ಅಧಿಕಾರಿ ಪ್ರತಾಪ್, ರೆಡ್ ಕ್ರಾಸ್ ಕಾರ್ಯದರ್ಶಿ ಗುರುರಾಜರಾವ್, ರೈತರು ಹಾಜರಿದ್ದರು.