Sidlaghatta : ಶಿಡ್ಲಘಟ್ಟದ ನಗರ ವ್ಯಾಪ್ತಿಯಲ್ಲಿ ಎರಡರಿಂದ ಮೂರು ಎಕರೆ ಸ್ಥಳವನ್ನು ಗುರುತಿಸಿ, ಆಯುಷ್ ಇಲಾಖೆಯ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಹೇಮಾರಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ವಲ್ಲಪನಹಳ್ಳಿ ಗ್ರಾಮದಲ್ಲಿ ಬುಧವಾರ ಆಯುಷ್ ಸೇವಾ ಗ್ರಾಮ, ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಹಾಗೂ ತೀವ್ರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಯುಷ್ ವೈದ್ಯ ಪದ್ಧತಿಯಿಂದ ಅಡ್ಡಪರಿಣಾಮವಿಲ್ಲದ ಚಿಕಿತ್ಸೆ ಪಡೆಯುವುದು, ಆಯುಷ್ ಅರಿವು, ಮನೆಮದ್ದು, ಪ್ರಾತ್ಯಕ್ಷಿಕೆ ಹಾಗೂ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು. ನಮ್ಮ ಪುರಾತನ ಕಾಲದ ಆಯುರ್ವೇದವು ನಮ್ಮ ಆರೋಗ್ಯ ರಕ್ಷಣೆಗೆ ಸಹಕಾರಿ. ಆಯುರ್ವೇದದ ಕುರಿತು ಸರ್ಕಾರಗಳು ಗ್ರಾಮೀಣ ಮಟ್ಟದಲ್ಲಿ ಈ ರೀತಿ ಯೋಜನೆಗಳ ಮೂಲಕ ಅರಿವು ಮೂಡಿಸುತ್ತಿರುವುದು ಅತ್ಯಂತ ಶ್ಲಾಘನೀಯ. ರೋಗ ಮುಕ್ತ ಗ್ರಾಮವನ್ನಾಗಿ ಮಾಡಲು ಅಧಿಕಾರಿಗಳೊಡನೆ ಗ್ರಾಮಸ್ಥರ ಸಹಕಾರ ಅತ್ಯಂತ ಅವಶ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಆರೋಗ್ಯಕರ ಆಹಾರ ಪದ್ಧತಿ ಬಗ್ಗೆ ಮಾಹಿತಿ ನೀಡಲಾಯಿತು. ಗ್ರಾಮಸ್ಥರಿಗೆ ಔಷಧಿಯುಕ್ತವಾದ ಗಿಡಗಳನ್ನು ವಿತರಿಸಿ, ಆಯುಷ್ ಇಲಾಖೆ ನಿರ್ದೇಶಿಸಿದ ಎಲ್ಲಾ ಕ್ರಮಗಳನ್ನು ಪಾಲಿಸುವಂತೆ ತಿಳಿಸಿಕೊಡಲಾಯಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ತಬೀಬಾ ಬಾನು ಮಾತನಾಡಿ, ಆಯಷ್ ಸೇವಾ ಗ್ರಾಮ ಯೋಜನೆಯಡಿ ಗ್ರಾಮವನ್ನು ದತ್ತು ಪಡೆದು ಆಯುರ್ವೇದದ ಬಗ್ಗೆ ಅರಿವು ಮೂಡಿಸಲಾಗುವುದು. ನಮ್ಮ ಇಲಾಖೆ ವತಿಯಿಂದ ಈ ಯೋಜನೆಯಡಿ ಗ್ರಾಮದ ಈ ಎಲ್ಲಾ ಕುಟುಂಬಗಳ ಆರೋಗ್ಯ ಸೇರಿದಂತೆ ನಾನಾ ಆಯಾಮಗಳಲ್ಲಿ ಸಮೀಕ್ಷೆ ನಡೆಸಲಾಗು ವುದು. ಯೋಗಾಭ್ಯಾಸದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಹಾಗೂ ತೀವ್ರ ಅತಿಸಾರ ನಿಯಂತ್ರಣ ಕುರಿತಾಗಿ ವೈದ್ಯರು ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಇಒ ಜಿ. ಮುನಿರಾಜ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ, ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಆಯುಷ್ ಇಲಾಖೆ ವೈದ್ಯರಾದ ಡಾ. ಸುಂದರರಾಜ್ ಮತ್ತು ಡಾ. ವಿಜಯಕುಮಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಅಮೃತಾ, ಸದಸ್ಯ ನಾರಾಯಣಸ್ವಾಮಿ ಪಿಡಿಒ ತನ್ವೀರ್ ಅಹಮದ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಡಾ. ಕಾರ್ತಿಕ ಮತ್ತು ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.