Bagepalli : ಬಾಗೇಪಲ್ಲಿ ತಾಲ್ಲೂಕು ಅಂಗನವಾಡಿ ನೌಕರರ ಸಂಘ (CITU) ತಾಲ್ಲೂಕು ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಗುರುವಾರ ನಿವೃತ್ತಿ (Retired) ಹೊಂದಿದ ಅಂಗನವಾಡಿ (Anganwadi)ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಗ್ರಾಚ್ಯುಟಿ (Gratuity) ನೀಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಶಿಶು ಕಲ್ಯಾಣಾಧಿಕಾರಿ ರಾಮಚಂದ್ರಪ್ಪ ಅವರಿಗೆ ಸಾಮೂಹಿಕವಾಗಿ ಅರ್ಜಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ರತ್ನಮ್ಮ “ನಿವೃತ್ತರಿಗೆ ಗ್ರಾಚ್ಯುಟಿ ಸಿಗುವವರೆಗೆ ಸಿಐಟಿಯು ಹೋರಾಟ ಮಾಡಲಿದೆ, ಗ್ರಾಚ್ಯುಟಿ ಕಾಯಿದೆ 1972ರ ಅಡಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದು ಅದರಂತೆ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ಗ್ರಾಚ್ಯುಟಿಯನ್ನು ಸರ್ಕಾರ ನೀಡಬೇಕು. ತಾಲ್ಲೂಕಿನಲ್ಲಿ ಇದುವರಿಗೂ 105 ಮಂದಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಇದ್ದು ಗ್ರಾಚ್ಯುಟಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳನ್ನು ಸೇರಿಸಿ ಅರ್ಜಿ ಸಲ್ಲಿಸುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ” ಎಂದು ಹೇಳಿದರು.
ಅಂಗನವಾಡಿ ನೌಕರರ ಸಂಘ(ಸಿಐಟಿಯು) ತಾಲ್ಲೂಕು ಕಾರ್ಯದರ್ಶಿ ಗೀತಾ, ಖಜಾಂಚಿ ವೆಂಕಟರವಣಮ್ಮ, ಅನಿತ, ಶಿಲ್ಪ, ನಿವೃತ್ತಿ ನೌಕರರ ಮುಖಂಡರಾದ ಅರುಣಮ್ಮ, ವೆಂಕಟಲಕ್ಷ್ಮಮ್ಮ, ಸುಮಾ, ಶಿಲ್ಪಮ್ಮ, ದಿಲ್ ಶಾದಿ ಹಾಗೂ ನಿವೃತ್ತ ನೌಕರರು ಉಪಸ್ಥಿತರಿದ್ದರು.