Bagepalli : ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ (Arogya Raksha sameeti Meeting) ನಡೆಸಲಾಯಿತು. ವೈದ್ಯ, ಸಿಬ್ಬಂದಿ ನೇಮಕ, ಆಂಬುಲೆನ್ಸ್‌ಗೆ ಡೀಸೆಲ್ ಹಾಕಿಸಲು ಹಣದ ಕೊರತೆ, ಆಸ್ಪತ್ರೆಯಲ್ಲಿ ಗಣಕೀಕರಿಸಲು, ಡಿಇಒ ನೇಮಕ,ತುರ್ತು ಔಷಧಿ, ಸಲಕರಣೆಗಳ ಖರೀದಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ “ನೂತನವಾಗಿ ಹೈಟೆಕ್ ಮಾದರಿಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಸುವ್ಯವಸ್ಥಿತ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಕಟ್ಟಡದ ಅಂದಾಜು ವೆಚ್ಚ, ಕಾರ್ಯಯೋಜನೆ ಪಟ್ಟಿ ಸಿದ್ಧಪಡಿಸುವಂತೆ ವೈದ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ. ಆಗಸ್ಟ್ ತಿಂಗಳಲ್ಲಿ ವೈದ್ಯರ ಹಾಗೂ ತಜ್ಞರನ್ನು ವರ್ಗಾವಣೆ ಮಾಡಲಾಗುತ್ತಿದೆ. ಇದರಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿ, ಸಚಿವರ ಬಳಿ ಚರ್ಚಿಸಲಾಗುವುದು. ಆರೋಗ್ಯ ಸಿಬ್ಬಂದಿ ರೋಗಿಗಳ ಹಾಗೂ ಸಾರ್ವಜನಿಕರ ಜೊತೆ ಉತ್ತಮವಾಗಿ ಸ್ಪಂದಿಸಿ ಸೂಕ್ತ ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿ ಔಷಧಿ ವಿತರಿಸಬೇಕು. ಸಮಿತಿಯು ಕೆಲ ಯೋಜನೆಗಳಿಗೆ, ಬಿಲ್‌ಗಳಿಗೆ, ಸಿಬ್ಬಂದಿ ನೇಮಕಕ್ಕೆ ಅನುಮೋದನೆ ನೀಡಲಾಗಿದೆ” ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಕೆ.ಸುಷ್ಮಾ, ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್, ಅಧಿಕಾರಿ ಶ್ರೀಧರ್, ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ಟಿ.ಸಿ.ತುಳಸಮ್ಮ, ಕಚೇರಿ ವ್ಯವಸ್ಥಾಪಕಿ ಸಿ.ಪ್ರೇಮಕುಮಾರಿ, ಆರೋಗ್ಯ ರಕ್ಷಾ ಸಮಿತಿಯ ನೂತನ ಸದಸ್ಯ ಜಯಪ್ರಕಾಶರೆಡ್ಡಿ, ಮನು, ರಾಹುಲ್ ಸಭೆಯಲ್ಲಿ ಉಪಸ್ಥಿತರಿದ್ದರು.