Bagepalli : ಸರ್ಕಾರಿ ಗೋಮಾಳವನ್ನು ರಿಯಲ್ ಇಸ್ಟೇಟ್ ದಂಧೆಯವರು ಒತ್ತುವರಿ ಮಾಡಿದ್ದರೂ ತಹಶೀಲ್ದಾರ್ ನಿರ್ಲಕ್ಷ್ಯ ವಹಿಸಿದ್ದಾರೆ. ಬರ ಹಾಗೂ ಬೆಳೆ ನಷ್ಟ ಪರಿಹಾರ ನೀಡಿಲ್ಲ, ಯರ್ರಕಾಲುವೆ ಸ್ವಚ್ಛತೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪುಟ್ಟಣ್ಣಯ್ಯ ಬಣದಿಂದ ರೈತರು ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಅನಿರ್ದಿಷ್ಟ ಕಾಲ ಆಹೋರಾತ್ರಿ ಧರಣಿ ಆರಂಭಿಸಿದರು.ಪ್ರತಿಭಟನಾಕಾರರು ಡಾ.ಎಚ್.ಎನ್.ವೃತ್ತದಿಂದ ಹೊರಟಟು ಮುಖ್ಯರಸ್ತೆಯಲ್ಲಿ ಸಂಚರಿಸಿ, ರೈತರ ಪರ ಕೆಲಸ ಮಾಡದ ತಾಲ್ಲೂಕು ಆಡಳಿತದ ವಿರುದ್ಧ ಧಿಕ್ಕಾರ ಕೂಗಿ ತಮಟೆ ವಾದನದ ಮೂಲಕ ಪ್ರತಿಭಟನಾ (Farmers Protest) ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಸಿರುಸೇನೆ ಪುಟ್ಟಣ್ಣಯ್ಯ ಬಣದ ಜಿಲ್ಲಾಧ್ಯಕ್ಷ ಟಿ.ಲಕ್ಷ್ಮಿ ನಾರಾಯಣರೆಡ್ಡಿ “ಕಸಬಾ ಹೋಬಳಿಯ ಕೊತ್ತುಕೋಟೆ ಗ್ರಾಮದ 9.31 ಕುಂಟೆ ಭೂಮಿ ಗೋಮಾಳ. ಜತೆಗೆ ಮಟ್ಟೇದ್ದಲ ದಿನ್ನೆ ಗ್ರಾಮದ ಸರ್ವೆ ನಂ. 19, 22, 50 ಹಾಗೂ ಚಿತ್ರಾವತಿ ಉಪನದಿ ಮತ್ತು ಕಾಲುವೆಗಳನ್ನು ಸಹ ರಿಯಲ್ ಎಸ್ಟೇಟ್ ದಂಧೆಕೋರರು ಒತ್ತುವರಿ ಮಾಡಿಕೊಂಡಿದ್ದು ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳಿಗೆ ಒತ್ತುವರಿ ಬಗ್ಗೆ ತಿಳಿದಿದ್ದರೂ ತೆರವು ಮಾಡುತ್ತಿಲ್ಲ. ಅಧಿಕಾರಿಗಳು ದಂಧೆಕೋರರ ಜತೆ ಶಾಮೀಲಾಗಿದ್ದಾರೆ. ರೈತರಿಗೆ ತಕ್ಷಣವೇ ಟ್ರಾನ್ಸ್‌ಫಾರ್ಮರ್‌ಗಳನ್ನು ನೀಡಿ ಹಗಲು, ರಾತ್ರಿ ವಿದ್ಯುತ್ ಸರಬರಾಜು ಮಾಡಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ರೈತರಿಗೆ ಸಹಾಯಧನ ವಿತರಿಸಬೇಕು. ಶಾಶ್ವತ ನೀರಾವರಿಗೆ ಡಾ.ಪರಮಶಿವಯ್ಯ ಅವರ ವರದಿ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ವಿಭಾಗ ಮಟ್ಟದ ಮಹಿಳಾ ಉಪಾಧ್ಯಕ್ಷೆ ಅನಸೂಯಮ್ಮ, ತಾಲ್ಲೂಕು ಅಧ್ಯಕ್ಷ ಕೆ.ಪಿ.ಈಶ್ವರರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಸುರೇಶ್, ಖಜಾಂಚಿ ಈಶ್ವರಪ್ಪ, ಸಂಚಾಲಕ ರಾಮಕೃಷ್ಣ, ಕೆ.ನಾರಾಯಣಸ್ವಾಮಿ, ಬಿ.ನಾರಾಯಣರೆಡ್ಡಿ, ಮಂಜುನಾಥ, ನಾರಾಯಣಪ್ಪ, ರಾಧಮ್ಮ, ಈಶ್ವರರೆಡ್ಡಿ, ಬೈರಾರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.