Bagepalli : ನಿವೇಶನ ಹಾಗೂ ಮನೆ ರಹಿತರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ, ಅಖಿಲ ಭಾರತ ಕಿಸಾನ್ ಸಂಘಟನೆ (Akhila Bharatiya Kisan Sangathane) ಮುಖಂಡರು ಬುಧವಾರ ಬಾಗೇಪಲ್ಲಿ ಪಟ್ಟಣದ ಡಾ.ಎಚ್.ಎನ್. ವೃತ್ತದಿಂದ ತೆರಳಿ, ಮುಖ್ಯರಸ್ತೆಯಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ (protest) ನಡೆಸಿದರು.
ಸಂಘಟನೆಯ ರಾಜ್ಯ ಸಂಚಾಲಕ ಕೆ.ವಿ. ರಾಮಚಂದ್ರ ಅವರು ಮಾತನಾಡಿ, ಕೃಷಿಕರು ಹಾಗೂ ಕೂಲಿಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದು ಮುಖ್ಯವಾಗಿ ಕೃಷಿಯಲ್ಲಿ ಅವಶ್ಯಕತೆ ಇರುವ ಹಿಂಗಾರು ಹಾಗೂ ಮುಂಗಾರು ಮಳೆಯ ಕೊರತೆ ಇದ್ದು, ನಗದು ದುಡಿಯಲು ಇತರ ಪ್ರದೇಶಗಳಿಗೆ ತೆರಳಿದ ಕೂಲಿಕಾರ್ಮಿಕರಿಗೆ ಸರ್ಕಾರದ ಕಡೆಯಿಂದ ಯಾವ ಸಹಾಯವೂ ಲಭ್ಯವಾಗುತ್ತಿಲ್ಲ. ತಾಲ್ಲೂಕಿನ ಕೆರೆ, ಕುಂಟೆ ಮತ್ತು ರಾಜಕಾಲುವೆಗಳನ್ನು ರಿಯಲ್ ಎಸ್ಟೇಟ್ ದಂಧೆಯವರು ದೋಚಿಕೊಂಡಿದ್ದು, ಸರಕಾರೀ ಜಾಗವನ್ನು ಒತ್ತುವರಿ ಮಾಡಿಕೊಂಡು ಶ್ರೀಮಂತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಶಿರಸ್ತೆದಾರ್ ಮಂಜುನಾಥ್ ಆಗಮಿಸಿ ಮನವಿ ಸ್ವೀಕರಿಸಿದರು. ಸಂಘಟನೆಯ ತಾಲ್ಲೂಕು ಅಧ್ಯಕ್ಷ ರಾಮರೆಡ್ಡಿ, ಕಾರ್ಯದರ್ಶಿ ಆದಿಶೇಷು, ಆರ್.ಎಂ.ಚಲಪತಿ, ಪ್ರಮೀಳ, ವೆಂಕಟರಮಣ, ಮುಜಾಮಿಲ್, ಮುನೀರ್ ಖಾನ್, ತಾಸಿನ್ ತಾಜ್ ಉಪಸ್ಥಿತರಿದ್ದರು.