Bagepalli : ಬಾಗೇಪಲ್ಲಿ ತಾಲ್ಲೂಕು ಕಚೇರಿ (Taluk Office) ಆವರಣದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ (S. N. Subbareddy) ಬುಧವಾರ ಕಂದಾಯ ಅಧಿಕಾರಿಗಳ (Revenue Officers) ಜೊತೆ ಪಟ್ಟಣದ ಸುತ್ತಮುತ್ತಲಿನ ಸರ್ಕಾರಿ ಖರಾಬು, ಗೋಮಾಳ ಸೇರಿದಂತೆ ಸರ್ಕಾರಿ ಜಮೀನುಗಳನ್ನು Real Estate ಹಾಗೂ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡುತ್ತಿರುವ ದೂರುಗಳ ಕುರಿತು ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕರು ” ಅಕ್ರಮ ಭೂ ಒತ್ತುವರಿಯಿಂದ ಸರ್ಕಾರಿ, ಖಾಸಗಿ ಸಂಘ-ಸಂಸ್ಥೆಗಳಿಗೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಸಬಾ ಹೋಬಳಿಯ ಘಂಟಂವಾರಿಪಲ್ಲಿ, ಪರಗೋಡು ಪಂಚಾಯಿತಿ ಸುತ್ತಲೂ ಕೆಲವರು ಸರ್ಕಾರಿ ಖರಾಬು, ಗೋಮಾಳ, ರಾಜಕಾಲುವೆ ಮುಚ್ಚಿ ಅಕ್ರಮವಾಗಿ ಬಡಾವಣೆ ನಿರ್ಮಿಸಿದ್ದಾರೆ. ಅಧಿಕಾರಿಗಳೇ ಕಮಿಷನ್ ದಂಧೆ ಮಾಡಿ ಇ–ಸ್ವತ್ತು, ನಿರಾಪೇಕ್ಷಣಾ ಪತ್ರಗಳನ್ನು ವಿತರಣೆ ಮಾಡಿದ್ದಾರೆ. 5 ಹೋಬಳಿ ಕೇಂದ್ರಗಳಲ್ಲಿ ವಾಲ್ಮೀಕಿ ಭವನ ನಿರ್ಮಿಸಲು 100*100 ಅಡಿಯಲ್ಲಿ ಸರ್ಕಾರಿ ಜಮೀನು ಗುರುತಿಸಬೇಕು. ತಾಲ್ಲೂಕಿನ ಪ್ರತಿ ಗ್ರಾಮಗಳಿಗೆ ಕಂದಾಯ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪಿಂಚಣಿ ರಹಿತರಿಗೆ ಆದೇಶ ಪತ್ರ ನೀಡಿ ದರಖಾಸ್ತು ಹಾಗೂ ಸರ್ಕಾರಿ ಜಮೀನುಗಳಲ್ಲಿ ಇರುವ ಜನರಿಗೆ ನಿವೇಶನದ ಹಕ್ಕು ಪತ್ರ ವಿತರಿಸಬೇಕು. ಕೆಲವು ಅಧಿಕಾರಿಗಳು, ಸಿಬ್ಬಂದಿಯ ಭ್ರಷ್ಟಾಚಾರದಿಂದ ಕ್ಷೇತ್ರಕ್ಕೆ ಕಪ್ಪುಚುಕ್ಕೆ ಬರುತ್ತಿದೆ ಈ ಬಗ್ಗೆ ತನಿಖೆ ನಡೆಸಿ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ” ಎಂದು ಹೇಳಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ವೈ. ರವಿ, ಗ್ರೇಡ್ 2 ತಹಶೀಲ್ದಾರ್ ವಿ. ಸುಬ್ರಮಣ್ಯ, ಶಿರಸ್ತೇದಾರ್ ನಾಗರಾಜ್, ಆಹಾರ ಶಾಖೆಯ ಶಿರಸ್ತೇದಾರ್ ಪ್ರಭಾಕರ್, ಸಬ್ ರಿಜಿಸ್ಟರ್ ಪ್ರಭಾಕರ ನಾಯಕ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ನಾಗಾಂಜನೇಯ ಉಪಸ್ಥಿತರಿದ್ದರು.