Bagepalli : ಬಾಗೇಪಲ್ಲಿ ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRDP) ತಾಲ್ಲೂಕು ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದ ಕರಪತ್ರವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಿ.ಎಸ್. ಪ್ರಶಾಂತ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಸ್. ಪ್ರಶಾಂತ್ ” ಸಂಸ್ಥೆಯಿಂದ ತಾಲ್ಲೂಕಿನಲ್ಲಿ ಮಹಿಳೆಯರಿಗೆ, ರೈತರಿಗೆ, ದುರ್ಬಲ ವರ್ಗದವರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ನೆರವು ನೀಡಲಾಗಿದೆ ಈ ವರೆಗೂ 2,411 ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಹಿಳಾ ಸ್ವಸಹಾಯ ಸಂಘಗಳಲ್ಲಿ ತಾಲ್ಲೂಕಿನ 19,590 ಮಂದಿ ಸಂಘದ ಸದಸ್ಯರಿದ್ದು 9,144 ಮಂದಿಗೆ ₹31.64 ಕೋಟಿ ಸಾಲ ನೀಡಲಾಗಿದೆ. ಅಂತರ್ಜಲ ಅಭಿವೃದ್ಧಿ ಮಾಡಲು ಕೆರೆಗಳನ್ನು ಪುನಃಶ್ಚೇತನ, ಮದ್ಯವರ್ಜನ ಶಿಬಿರಗಳು, ಮಂದಿರ, ಮಸೀದಿ, ಚರ್ಚ್‍ಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಗಿದೆ. ಮಹಿಳೆಯರಿಗೆ ಟೈಲರಿಂಗ್, ಕಸೂತಿ, ಕರಕುಶಲ ತರಬೇತಿಗಳನ್ನು ಹಾಗೂ ರೈತರಿಗೆ ಕೃಷಿ ಯಂತ್ರಗಳನ್ನು ವಿತರಿಸಲಾಗಿದೆ” ಎಂದು ತಿಳಿಸಿದ್ದರು.
ಯೋಜನೆಯ ತಾಲ್ಲೂಕು ನಿರ್ದೇಶಕ ಬಿ.ಪಿ.ಗಿರೀಶ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಡಿ.ಎನ್. ಕೃಷ್ಣಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಿ. ವೆಂಕಟೇಶ್, ಸಂಸ್ಥೆಯ ಮೇಲ್ವಿಚಾರಕಿ ಸಾರಮ್ಮ, ಕೃಷಿ ಅಧಿಕಾರಿ ಧನಂಜಯ್ ಮತಿತ್ತರರು ಉಪಸ್ಥಿತರಿದ್ದರು.