Bagepalli : ಸರ್ಕಾರ ಮೈಕ್ರೊ ಫೈನಾನ್ಸ್ (Micro Finance) ಸಂಸ್ಥೆಗಳನ್ನು ಮುಟ್ಟುಗೋಲು ಹಾಕಬೇಕು. ದಿನ, ವಾರದ ವಸೂಲಿಯ ಮೀಟರ್ ದಂಧೆಕೋರರ ವಿರುದ್ಧ ಕ್ರಮ ಜರುಗಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಮಹಿಳೆಯರಿಗೆ ಸಾಲ ಸೌಲಭ್ಯ ಕಲ್ಪಿಸಬೇಕು. ರೈತ ಮಹಿಳೆಯರ ಸಾಲ ಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಾಗೇಪಲ್ಲಿ ತಾಲ್ಲೂಕು ಜನವಾದಿ ಮಹಿಳಾ ಸಂಘಟನೆ (Bagepalli Taluk Janavadi Women’s Organization) ನೇತೃತ್ವದಲ್ಲಿ ಮಹಿಳೆಯರು ಸೋಮವಾರ ಬಾಗೇಪಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗದಿಂದ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ತಾಲ್ಲೂಕು ಸಂಚಾಲಕಿ ಸಿ.ಉಮಾ, “ನಾಯಿಕೊಡೆಗಂತೆ ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಹೆಚ್ಚಾಗಿದ್ದು ಮಹಿಳೆಯರಿಗೆ, ಕೂಲಿಕಾರ್ಮಿಕರಿಗೆ ದುಬಾರಿ ಬಡ್ಡಿಗೆ ಸಾಲ ನೀಡಿ ಪ್ರತಿದಿನ, ವಾರ ಮರುಪಾವತಿ ಮಾಡಬೇಕು ಎಂದು ಕೆಲವರು ಮೀಟರ್ ಬಡ್ಡಿ ದಂಧೆಕೋರರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ದೈಹಿಕವಾಗಿ ಹಿಂಸಿಸುತ್ತಾರೆ. ಮಹಿಳೆಯರ ಕುಟುಂಬಗಳನ್ನು ಆರ್ಥಿಕ ಸಂಕಷ್ಟಕ್ಕೆ ಹಾಗೂ ದೌರ್ಜನ್ಯಕ್ಕೆ ನೂಕುತ್ತಿದ್ದಾರೆ” ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಮನೀಷ್ ಎನ್. ಭೇಟಿ ನೀಡಿ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ತಾಲ್ಲೂಕು ಸಂಘಟನಾ ಸಂಚಾಲಕಿ ಬಿ.ಸಾವಿತ್ರಮ್ಮ, ಜನವಾದಿ ಮಹಿಳಾ ಸಂಘಟನೆಯ ಅನಿತಾ, ಸರಿತ, ಶಾಂತಮ್ಮ, ಅನಿತಮ್ಮ ಮುಖಂಡರಾದ ಚನ್ನರಾಯಪ್ಪ, ಲಕ್ಷ್ಮಣರೆಡ್ಡಿ, ಸೋಮಶೇಖರ ಮತ್ತಿತರರು ಉಪಸ್ಥಿತರಿದ್ದರು.