Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಸಹಯೋಗದಲ್ಲಿ ‘ಬ್ಯಾಂಕ್ ದಿನಾಚರಣೆ’ (Bank Day) ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ.ಅರುಣಾ ಕುಮಾರಿ “ಸಮಾಜಕ್ಕೆ ಬ್ಯಾಂಕಿಂಗ್ ಕ್ಷೇತ್ರದ ಕೊಡುಗೆ ಅಪಾರವಾದುದು. ಸಮಾಜದಲ್ಲಿ ಪ್ರತಿ ನಿತ್ಯ ಹಲವು ಹಣಕಾಸಿನ ವಹಿವಾಟುಗಳು ನಡೆಯುತ್ತವೆ. ಅವೆಲ್ಲವು ಸುಲಲಿತವಾಗಿ, ಕ್ರಮಬದ್ಧವಾಗಿ, ನಡೆಸುವುದರ ಜೊತೆಗೆ ಸೂಕ್ತ ಲೆಕ್ಕಪತ್ರಗಳ ನಿರ್ವಹಣೆಗೆ, ನಿಖರತೆಗೆ ಬ್ಯಾಂಕುಗಳು ಹೆಸರಾಗಿವೆ. ಭಾರತೀಯ ಸಮಾಜದಲ್ಲೂ ಬ್ಯಾಂಕಿಂಗ್ ಕ್ಷೇತ್ರ ಉತ್ತಮ ಸಾಧನೆ ಮಾಡಿದೆ ಎಂದರೆ ತಪ್ಪಾಗಲಾರದು” ಎಂದರು.
ಜುಲೈ 8 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ತಮ್ಮ ಬ್ಯಾಂಕಿಗೆ ಸಂಬಂಧಿಸಿದ ಬ್ಯಾಂಕ್ ವಸೂಲಾತಿ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು ಬಾಕಿ ಇದ್ದಲ್ಲಿ ಬ್ಯಾಂಕ್ ಪ್ರತಿನಿಧಿಗಳು ಭಾಗವಹಿಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಎ.ಅರುಣಾ ಕುಮಾರಿತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಪ್ರಾದೇಶಿಕ ವ್ಯವಸ್ಥಾಪಕ ಎನ್.ಸಿ.ದಾಮೋದರ್, ಮುಖ್ಯ ವ್ಯವಸ್ಥಾಪಕ ಮೋಹನ್ ಕುಮಾರ್, ಖಾಖಾ ವ್ಯವಸ್ಥಾಪಕಿ ಎಸ್.ಮುನಿರತ್ನಮ್ಮ, ಮುಖ್ಯ ಲೆಕ್ಕಾಧಿಕಾರಿ ಎ. ಹರೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ಎಸ್.ಎಸ್, ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲ ಜಿ.ಡಿ, ಚಂದ್ರಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಗಿರಿಜಾ ಶಂಕರ್ ಮತ್ತು ಜಿಲ್ಲಾ ಖಜಾನಾ ಉಪನಿರ್ದೇಶಕ ಮಂಜುನಾಥ್ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.