Sidlaghatta : ಕೋಲಾರದಲ್ಲಿ ನಡೆದ ಜನತಾ ದರ್ಶನದಲ್ಲಿ ಸಂಸದ ಎಸ್.ಮುನಿಸ್ವಾಮಿ ಅವರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ತಾಲ್ಲೂಕು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಕೋಲಾರದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಿದರು.
ನಗರದ ಮಯೂರ ವೃತ್ತದಲ್ಲಿನ ಬಿಜೆಪಿಯ ಸೇವಾಸೌಧದ ಬಳಿ ಬಸ್ಸುಗಳಲ್ಲಿ ತೆರಳುವ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, “ಸಂಸದ ಎಸ್.ಮುನಿಸ್ವಾಮಿ ಅವರನ್ನು ಕೋಲಾರದ ಎಸ್ಪಿ ಅವರು ಕಾರ್ಯಕ್ರಮದ ವೇದಿಕೆಯಿಂದ ತಳ್ಳಿಕೊಂಡು ಹೊರ ದಬ್ಬಿದರು. ಇದು ಜನಪ್ರತಿನಿಧಿಯೊಬ್ಬರ ಮೇಲೆ ನಡೆದ ದಬ್ಬಾಳಿಕೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ಸಿಗರಿಗೆ ಅಧಿಕಾರದ ಮದ ನೆತ್ತಿಗೇರಿದೆ. ಅವರ ನಿಜವಾದ ಮುಖ ದರ್ಶನ ಆಗಿದೆ” ಎಂದು ಕಾಂಗ್ರೆಸ್‌ನವರ ದೌರ್ಜನ್ಯದ ಪ್ರವೃತ್ತಿಯನ್ನು ಖಂಡಿಸಿದರು.
“ಜನತಾ ದರ್ಶನದಲ್ಲಿ ಸಂಸದ ಮುನಿಸ್ವಾಮಿಯ ಮೇಲೆ ನಡೆದದ್ದು ಅವರೊಬ್ಬರ ಮೇಲೆ ನಡೆದ ದೌರ್ಜನ್ಯ ದಬ್ಬಾಳಿಕೆ ಅಲ್ಲ ಜನಪ್ರತಿನಿಧಿಯೊಬ್ಬರ ಮೇಲೆ ಅಧಿಕಾರಿಗಳ ಮೂಲಕ ಕಾಂಗ್ರೆಸ್ ಪಕ್ಷ ನಡೆಸಿದ ದಬ್ಬಾಳಿಕೆ” ಎಂದು ದೂರಿದರು.
“ಈ ವ್ಯವಸ್ಥೆಯನ್ನು, ಅಧಿಕಾರದಲ್ಲಿರುವವರ ದಬ್ಬಾಳಿಕೆಯ ಪ್ರವೃತ್ತಿಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ನಾವು ನೀವೆಲ್ಲರೂ ಖಂಡಿಸಬೇಕು. ಹಾಗಾಗಿ ಕೋಲಾರದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದ್ದು, ಬಿಜೆಪಿ ಕಾರ್ಯಕರ್ತರೆಲ್ಲಾ ತೆರಳುತ್ತಿದ್ದೇವೆ” ಎಂದರು.
ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಸೀಕಲ್ ಆನಂದಗೌಡ, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಭರತ್, ಪ್ರಸನ್ನ, ತ್ರಿವೇಣಿ ಹಾಜರಿದ್ದರು.