Chelur : ಚೇಳೂರು ತಾಲ್ಲೂಕಿನ ರೇಚನಾಯ್ಕನಹಳ್ಳಿ (ರೇಷ್ಮೆಪಲ್ಲಿ) ಸಮೀಪದ ಗೊಲ್ಲಪಲ್ಲಿ ಕ್ರಾಸ್ ತಿರುವಿನಲ್ಲಿ ಗುರುವಾರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಖಾಸಗಿ ಬಸ್ (Bus Accident) ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಚಾಲಕನ ಅತಿವೇಗವೇ ಅಪಘತಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಚಿಂತಾಮಣಿಯಿಂದ ಬಾಗೇಪಲ್ಲಿ ಗೆ ಹೊರಟ ಖಾಸಗಿ ಬಸ್ ಚಾಲವೇಲು–ಪಾತಪಾಳ್ಯ ಮಾರ್ಗದ ಗೊಲ್ಲಪಲ್ಲಿ ಕ್ರಾಸ್ ಬಳಿ ರಸ್ತೆಯಲ್ಲಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಲು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಉಜ್ಜಿ ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ 33 ಪ್ರಯಾಣಿಕರಿಗೆ ಗಾಯಗಳಾಗಿದ್ದು ಅವರನ್ನು ಬಾಗೇಪಲ್ಲಿ, ಚಿಕ್ಕ ಬಳ್ಳಾಪುರ ಹಾಗೂ ಬೆಂಗಳೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರನ್ನು ಚೇಳೂರು ತಾಲ್ಲೂಕಿನ ರೇಷ್ಮೆಪಲ್ಲಿ ಗ್ರಾಮದ ತಲಾರಿ ವೆಂಕಟರಾಯಪ್ಪ (69) ಹಾಗೂ ನಾರೇಮದ್ದೆಪಲ್ಲಿ ಗ್ರಾಮದ ವಿಎಸ್‌ಎಸ್‌ಎನ್ ಸೊಸೈಟಿಯ ಸಹಾಯಕ ಅಹಮದ್ ಬಾಷಾ (26) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಪಾತಪಾಳ್ಯ-ಚೇಳೂರು ಪೊಲೀಸರು ಭೇಟಿ ನೀಡಿ ಪರಾರಿಯಾಗಿರುವ ಚಾಲಕ ಸಂತೋಷ್ ನ ಹುಡುಕಾಟ ನಡೆಸುತ್ತಿದ್ದಾರೆ.