Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಆರ್. ಲತಾ (Chikkaballapur District Commissioner R Latha) ಅಧ್ಯಕ್ಷತೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (Agriculture Crop MSP) ಜಿಲ್ಲೆಯಲ್ಲಿ ರಾಗಿ ಮತ್ತು ಬಿಳಿಜೋಳ ಖರೀದಿ ಕುರಿತ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಆರ್. ಲತಾ “ಜಿಲ್ಲೆಯಲ್ಲಿ ರಾಗಿ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಬಿತ್ತನೆಯಾದ ಒಟ್ಟು ರಾಗಿ ಬೆಳೆಯಲ್ಲಿ ಶೇ 59ರಷ್ಟು ಬೆಳೆ ಈ ವರ್ಷ ಸುರಿದ ಧಾರಾಕಾರ ಮಳೆಗೆ ಹಾನಿಯಾಗಿದೆ.
ಇನ್ನುಳಿದ ಬೆಳೆಗಾದರೂ ಸೂಕ್ತ ಬೆಲೆ ಸಿಗಬೇಕು ಎಂಬ ಸರ್ಕಾರದ ನಿರ್ದೇಶನದನ್ವಯ 2021-22ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆ ಆಸಕ್ತ ರೈತರಿಂದ ರಾಗಿ ಮತ್ತು ಬಿಳಿಜೋಳ ಖರೀದಿಸಲು ನಿರ್ಧರಿಸಿದ್ದು ಪ್ರತಿ ಕ್ವಿಂಟಲ್ ರಾಗಿಗೆ ₹ 3377 ಹಾಗೂ ಪ್ರತಿ ಕ್ವಿಂಟಲ್ ಬಿಳಿಜೋಳ-ಹೈಬ್ರೀಡ್ ₹ 2738 ಮತ್ತು ಬಿಳಿಜೋಳ ಮಾಲ್ದಂಡಿ ₹ 2758 ನಿಗದಿಗೊಳಿಸಲಾಗಿದೆ.
ಸರ್ಕಾರ ನಿಗದಿಪಡಿಸಿರುವ ಗುಣಮಟ್ಟಕ್ಕೆ ಅನುಗುಣವಾಗಿ ರಾಗಿ ಮತ್ತು ಬಿಳಿಜೋಳ ನೀಡಲು ಇಚ್ಛಿಸುವ ಜಿಲ್ಲೆಯ ರೈತರ ನೋಂದಣಿ ಕಾರ್ಯ ಡಿಸೆಂಬರ್ 22 ರಿಂದ ಪ್ರಾರಂಭಿಸಲಾಗುವುದು. ರಾಗಿ ಮಾರಲಿಚ್ಛಿಸುವ ಜಿಲ್ಲೆಯ ಸಮಸ್ತ ರೈತರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು” ತಿಳಿಸಿದರು.
ರಾಗಿ ಮತ್ತು ಬಿಳಿಜೋಳ ಖರೀದಿ ಹಂತದಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ವಯ F.A.Q ಗುಣಮಟ್ಟ ದೃಢೀಕರಿಸಲು ಖರೀದಿ ಏಜೆನ್ಸಿಗಳು ಕ್ರಮವಹಿಸಬೇಕು. ಆಗಾಗ ಖರೀದಿ ಏಜೆನ್ಸಿ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳುವುದು ಹಾಗೂ ಆಹಾರ ಧಾನ್ಯ ಉತ್ತಮ ಗುಣಮಟ್ಟದ ಗೋಣಿ ಚೀಲದಲ್ಲಿಯೇ ಸಂಗ್ರಹಿಸಿ ಖರೀದಿಸಲು ಮತ್ತು ಗೋಣಿ ಚೀಲ ಖರೀದಿ ವೆಚ್ಚವಾಗಿ ರೈತರಿಗೆ ಪ್ರತಿ 50 ಕೆ.ಜಿ ಚೀಲಕ್ಕೆ ₹22 ರಂತೆ ನೇರ ನಗದು ವರ್ಗಾವಣೆ (Direct Benifit Transfer) ಮೂಲಕ ಪಾವತಿಸಬೇಕು.
ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಲ್ ನಂತೆ ಗರಿಷ್ಠ 20 ಕ್ವಿಂಟಲ್ ರಾಗಿ ಹಾಗೂ ಪ್ರತಿ ಎಕರೆಗೆ 10 ಕ್ವಿಂಟಲ್ ನಂತೆ ಗರಿಷ್ಠ 20 ಕ್ವಿಂಟಲ್ ಜೋಳ ಪ್ರತಿ ರೈತರಿಂದ ಖರೀದಿಸಬಹುದು. ಸರ್ಕಾರವು ನಿಗದಿಪಡಿ ಸಿರುವ ಪ್ರಮಾಣ ಮೀರಿ ಹೆಚ್ಚುವರಿ ಯಾಗಿ ರಾಗಿ ಹಾಗೂ ಜೋಳ ಖರೀದಿಸುವಂತಿಲ್ಲ ಎಂದು ಆಹಾರ ಮತ್ತು ಸರಬರಾಜು ಇಲಾಖೆಯ ಉಪನಿರ್ದೇಶಕಿ ಸವಿತಾ ಹೇಳಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2021-22ನೇ ಸಾಲಿಗೆ ರೈತರಿಂದ ಜಿಲ್ಲೆಯಲ್ಲಿ ರಾಗಿ ಮತ್ತು ಜೋಳ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಂಗ್ರಹಣ ಏಜೆನ್ಸಿಯನ್ನಾಗಿ ಸರ್ಕಾರ ನೇಮಿಸಿದ್ದು 2022ರ ಜನ.1 ರಿಂದ ಮಾ.31 ರವರೆಗೆ ಸರ್ಕಾರದ ನಿರ್ದೇಶನದಂತೆ ಸದರಿ ಯೋಜನೆಯಡಿ ರಾಗಿ ಮತ್ತು ಜೋಳವನ್ನು ಜಿಲ್ಲೆಯಲ್ಲಿ ಖರೀದಿಸಲಾಗುವುದು.
ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ರೈತರ ನೊಂದಣಿ ಕಾರ್ಯ ಡಿ.22ರಿಂದ ಆರಂಭಿಸಿ, 2022 ಜ.1ರಿಂದ ಖರೀದಿ ಪ್ರಕ್ರಿಯೆ ಪ್ರಾಂಭಿಸುವಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಇದಕ್ಕೆ ಸಂಬಂದಿಸಿದಂತೆ ಇಲಾಖೆ ಅಧಿಕಾರಿಗಳು ನೊಂದಣಿ ಹಾಗೂ ಖರೀದಿ ಕೇಂದ್ರಗಳ ವಿವರ ಸಭೆಗೆ ಸಲ್ಲಿಸಿದರು.
ಸಭೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ತಹಶೀಲ್ದಾರ್ ಗಣಪತಿಶಾಸ್ತ್ರಿ, ಆಹಾರ ಮತ್ತು ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಚೌಡೇಗೌಡ, ವಿವಿಧ ತಾಲ್ಲೂಕುಗಳ ಆಹಾರ ಶಿರಸ್ತೇದಾರ್ ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.