Chikkaballapur : ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ Covid-19 ಸೋಂಕು ನಿಯಂತ್ರಣ ಹಾಗೂ ಲಸಿಕಾಕರಣ (Vaccination) ಕುರಿತ ಆನ್‌ಲೈನ್ ಸಂವಾದದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಆರ್.ಲತಾ (Deputy Commissioner R. Latha) ವಹಿಸಿಕೊಂಡಿದ್ದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು “ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದು 2 ನೇ ಡೋಸ್ ಪಡೆಯಲು ಬಾಕಿ ಇರುವವರ ವಿವರ ಪಡೆದು ಅಂತಹವರನ್ನು ಎರಡು ಮೂರು ದಿನಗಳಲ್ಲಿ ಲಸಿಕೀಕರಣದ ವ್ಯಾಪ್ತಿಗೆ ಒಳಪಡಿಸಿ 2ನೇ ಡೋಸ್ ಹಾಕಿಸಿ ಎರಡನೇ ಡೋಸ್ ವಿಚಾರದಲ್ಲಿ 100% ಪ್ರಗತಿ ಸಾಧಿಸಬೇಕು. ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿತ್ಯ ಬೆಂಗಳೂರಿಗೆ ಹೋಗಿಬರುವವರಿಂದ ಸೋಂಕು ಜಿಲ್ಲೆಯಲ್ಲಿ ಹರಡದಂತೆ ಹೆಚ್ಚಿನ ನಿಗಾವಹಿಸಿ ಅಂತಹವರನ್ನು ಆಗಾಗ್ಗೆ ಕೋವಿಡ್ ಪರೀಕ್ಷೆ ಮಾಡಬೇಕು. ಜಿಲ್ಲೆಯಾದ್ಯಂತ ಸರ್ಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಸರ್ಕಾರಿ ರಜಾ ದಿನಗಳನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಬೇಕಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯಾಡಳಿತಗಳ ಅಧಿಕಾರಿಗಳು ಯಾರಾದರೂ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಬೇಕು” ಎಂದು ಹೇಳಿದರು.
ಕೋವಿಡ್ ಮಾರ್ಗಸೂಚಿಯಂತೆ ರಾತ್ರಿ ಮತ್ತು ವಾರಾಂತ್ಯದ ನಿಷೇಧಾಜ್ಞೆಯನ್ನು (Weekend Curfew) ಕಟ್ಟುನಿಟ್ಟಾಗಿ ಜಾರಿಗೊಳಿಸಲು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಸೂಚಿಸಲಾಗಿದೆ. ಹಣ್ಣು, ತರಕಾರಿ, ಹಾಲು ಸೇರಿದಂತೆ ಇತರೆ ಅಗತ್ಯ ವಸ್ತುಗಳ ಪೂರೈಕೆಗೆ ತಳ್ಳುವ ಗಾಡಿಗಳ ಮೂಲಕ ವ್ಯಾಪಾರ ಮಾಡುವವರಿಗೆ ಯಾವುದೇ ಅಡೆತಡೆಗಳನ್ನು ಮಾಡುವುದಿಲ್ಲ. ಆಟೊ ಅಥವಾ ಧ್ವನಿ ವರ್ಧಕಗಳ ಮೂಲಕ ಅಂತರ ಕಾಪಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲು ನಗರ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳು ಪ್ರಚಾರಕೈಗೊಳ್ಳಲು ಕ್ರಮವಹಿಸಬೇಕು ಎಂದು ಜಿಲ್ಲಾ Police ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ (G.K. Mithun Kumar) ಕುಮಾರ್ ತಿಳಿಸಿದರು.
ಶಬರಿಮಲೈ, ಮೆಲ್ ಮರವತ್ತೂರ್ ಓಂ ಶಕ್ತಿ ಹಾಗೂ ಇತರ ಧಾರ್ಮಿಕ ಸ್ಥಳಗಳಿಗೆ ತೆರಳುವ ಭಕ್ತರು ಅಲ್ಲಿಗೆ ತೆರಳುವ ಮುನ್ನ 72 ಗಂಟೆಗಳ ಒಳಗೆ RT-PCR ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿರಬೇಕು. ಬಳಿಕ ದೇವರ ದರ್ಶನದ ಊರಿಗೆ ಹಿಂದಿರುಗಿದ ನಂತರ ಒಂದು ವಾರ ಕಡ್ಡಾಯವಾಗಿ ಹೋಂ ಐಸೋಲೇಷನ್‌ನಲ್ಲಿ ಇರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ ಸಭೆಯಲ್ಲಿ ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ಕೋವಿಡ್ ನಿಯಂತ್ರಣ ನೋಡಲ್ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿ ಸಭೆಯಲ್ಲಿಪಾಲ್ಗೊಂಡಿದ್ದರು.