Chikkaballapur : ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಸದ ಬಿ.ಎನ್.ಬಚ್ಚೇಗೌಡ (B. N. Bache Gowda) ನೇತೃತ್ವದಲ್ಲಿ ಜಿಲ್ಲಾ ಅಭಿವೃದ್ದಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆ (Disha Meeting) ನಡೆಯಿತು. ಸಭೆಯಲ್ಲಿ ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿಗಳ ಮೂಲಕ ಮಕ್ಕಳಿಗೆ ನೀಡುತ್ತಿರುವ ‘ಪುಷ್ಟಿ’ ಆಹಾರವು ಸಮರ್ಪಕವಾಗಿ ಬಳಕೆ ಆಗದಿರುವ ಬಗ್ಗೆ ಚರ್ಚೆ ಮಾಡಲಾಯಿತು.
ದಿಶಾ ಸಮಿತಿ ಸದಸ್ಯೆ ಶೋಭಾ ಮಾತನಾಡಿ ” ‘ಪುಷ್ಟಿ’ ಆಹಾರ ಬಳಕೆ ಬಗ್ಗೆ ಮಕ್ಕಳ ಪೋಷಕರಿಗೆ ಅರಿವು ಇಲ್ಲ ಮತ್ತು ಈ ಆಹಾರದ ಪೊಟ್ಟಣಗಳು ಬೀದಿಪಾಲಾಗುತ್ತಿವೆ ಹಾಗೂ ಕೆಲವು ಮನೆಗಳಲ್ಲಿ ಜಾನುವಾರುಗಳಿಗೆ ನೀಡುತ್ತಿದ್ದಾರೆ. ಈ ಕುರಿತು ಗೌರಿಬಿದನೂರು ತಾಲ್ಲೂಕಿನ ಹಲವು ಅಂಗನವಾಡಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಹಲವು ಅಂಗನವಾಡಿಗಳಲ್ಲಿ ನೀಡುವ ಪೊಂಗಲ್ ಗುಣಮಟ್ಟದಲ್ಲಿ ಇರುವುದೇ ಇಲ್ಲ. ತಿಂಗಳಿಗೆ 300 ಗ್ರಾಂ ಹಾಲಿನ ಪೌಡರ್ ನೀಡುವ ಬದಲು ಒಮ್ಮೆಯೇ ಹೆಚ್ಚಿನ ಪೌಡರ್ ನೀಡುವುದರಿಂದ ಗುಣಮಟ್ಟ ಹಾಳಾಗುತ್ತದೆ” ಎಂದು ಹೇಳಿ ಇದನ್ನು ಸಾಬೀತು ಪಡಿಸಲು ತಮ್ಮ ಬಳಿ ವಿಡಿಯೋ ದಾಖಲೆಗಳಿವೆ ಎಂದು ಹೇಳಿದರು.
‘ಅವಧಿ ಮುಗಿದ ಆಹಾರದ ಪ್ಯಾಕೆಟ್‌ಗಳನ್ನು ಮತ್ತು ಹಾಲಿನ ಪೌಡರ್ ಅನ್ನು ವಿತರಿಸಬಾರದು. ಈ ಬಗ್ಗೆ ಸರ್ವೆ ನಡೆಸಿ ವರದಿ ನೀಡಿ’ ಎಂದು ಬಿ.ಎನ್.ಬಚ್ಚೇಗೌಡ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ದಿಶಾ ಸಮಿತಿ ಸದಸ್ಯರಾದ ಲಕ್ಷ್ಮಿನಾರಾಯಣಗುಪ್ತ, ರುಕ್ಷ್ಮಿಣಿ, ವೆಂಕಟೇಶ್, ಮುನಿಸ್ವಾಮಿ, ರಂಗನಾಥ್, ಶೋಭಾ ಉಪಸ್ಥಿತರಿದ್ದರು.