Sidlaghatta : ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಧಕರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ವೀರಗಾಸೆ ಕಲಾವಿದ ಕೊತ್ತನೂರು ಗಂಗಾಧರ್, ಸೈಕಲ್ ಅಂಬಾರಿ ಮಂಜುನಾಥ್ ಅವರೂ ಸ್ಥಾನ ಪಡೆದಿದ್ದಾರೆ.
ಕೊತ್ತನೂರು ಗಂಗಾಧರ್
ಚಿಕ್ಕ ವಯಸ್ಸಿನಿಂದಲೇ ವೀರಗಾಸೆ ಕಲೆಯನ್ನು ಕರಗತ ಮಾಡಿಕೊಂಡ ಕೊತ್ತನೂರು ಗಂಗಾಧರ್ ಅವರಿಗೆ ಈ ಕಲೆಯನ್ನು ಕಲಿಸಿದ ಗುರು, ಅವರ ತಂದೆ ವೀರಭದ್ರಯ್ಯ. ಕಳೆದ 25 ವರ್ಷಗಳಿಂದ ವೀರಭದ್ರ ಕುಣಿತ, ವೀರಗಾಸೆ, ನಾಸಿಕ್ ಡೋಲು, ಕರಡೆ ಚಮ್ಮೇಳ, ನಂದಿ ಧ್ವಜ ಮೊದಲಾದ ಕಲೆಗಳನ್ನು ರಾಜ್ಯ ಮತ್ತು ಅಂತರರಾಜ್ಯದ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಿದ್ದಾರೆ.
ಯುವ ಕಲಾವಿದರ ತಂಡವೊಂದನ್ನು ಕಟ್ಟಿರುವ ಕೊತ್ತನೂರು ಗಂಗಾಧರ್ ಅವರು, ವೀರಭದ್ರ ಕುಣಿತ, ವೀರಗಾಸೆ, ನಾಸಿಕ್ ಡೋಲು, ಕರಡೆ ಚಮ್ಮೇಳ, ನಂದಿ ಧ್ವಜ, ಭದ್ರಕಾಳಿ ಕುಣಿತ, ಅಗೋರಿ ಕುಣಿತ ಮೊದಲಾದ ಕಲೆಗಳನ್ನು ಯುವಕರಿಗೆ ತರಬೇತಿ ನೀಡುತ್ತಾರೆ.
ಸ್ಟಾರ್ ಆಫ್ ಕರ್ನಾಟಕ ರಾಜ್ಯ ಪ್ರಶಸ್ತಿ, ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ, ಡಾ.ಸಿದ್ದಯ್ಯ ಪುರಾಣಿಕ ಪ್ರಶಸ್ತಿ, ಸದ್ಭಾವನಾ ಪ್ರಶಸ್ತಿ, ಕರ್ನಾಟಕ ಚೇತನ ಪ್ರಶಸ್ತಿ, ಕರುನಾಡ ಪದ್ಮಶ್ರೀ ಪುರಸ್ಕಾರ, ಕಲಾಶ್ರೀ ಪ್ರಶಸ್ತಿ, ಕೊಪ್ಪಳ ಐಸಿರಿ ಪ್ರಶಸ್ತಿ, ಶ್ರೀ ಗುರು ರಾಘವೇಂದ್ರ ಪುರಸ್ಕಾರ, ಇನ್ನತಿ ವೀರಭದ್ರ ಕುಣಿತ ಕಲಾ ರತ್ನ ಪ್ರಶಸ್ತಿ, ಶ್ರೀ ಕಾಶಿ ವಿಶ್ವನಾಥ ರಾಷ್ಟ್ರೀಯ ಪ್ರಶಸ್ತಿ, ಶ್ರೀ ರೇವಣಸಿದ್ದೇಶ್ವರ ಶ್ರೀ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಕೊತ್ತನೂರು ಗಂಗಾಧರ್ ಅವರಿಗೆ ಲಭಿಸಿವೆ.
ಸೈಕಲ್ ಅಂಬಾರಿ ವಿ.ಸಿ.ಮಂಜುನಾಥ
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆಯುವ ಗಣ ರಾಜ್ಯೋತ್ಸವ, ಸ್ವಾತಂತ್ರ ದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗೂ ನಾಡ ಹಬ್ಬಗಳ ಕಾರ್ಯಕ್ರಮಗಳಿಗೆ ಸೈಕಲ್ ಗೆ ಕಟೌಟ್ (ಅಂಬಾರಿ) ಕಟ್ಟಿ, ಅದರಲ್ಲಿ ಭಾರತ ಮಾತೆ, ಕರ್ನಾಟಕ ಮಾತೆ ಹಾಗೂ ಕವಿಗಳ ಭಾವಚಿತ್ರಗಳೊಂದಿಗೆ ಅಲಂಕರಿಸಿ ಮೆರವಣಿಗೆ ಮಾಡುವುದು, ಸೈಕಲ್ ಗೆ ಮೈಕ್ ಕಟ್ಟಿಕೊಂಡು ಕನ್ನಡ ಗೀತೆಗಳನ್ನು ಹಾಕಿಕೊಂಡು ತಿರುಗುವ ಕೆಲಸವನ್ನು ಕಳೆದ ಹಲವು ವರ್ಷಗಳಿಂದ ವಿ.ಸಿ.ಮಂಜುನಾಥ ಮಾಡುತ್ತಾ ಬಂದಿದ್ದಾರೆ.