Chikkaballapur : ಚಿಕ್ಕಬಳ್ಳಾಪುರ ನಗರದ 12 ನೇ ವಾರ್ಡಿನ ಬುದ್ಧ ಸರ್ಕಲ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 65 ನೇ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಬಿ.ಎಸ್.ಆನಂದಬಾಬುರೆಡ್ಡಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡುವ ಉತ್ತಮ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಎಲ್ಲಾ ದೇಶಗಳಲ್ಲಿ ಜನರ ಪರವಾಗಿರುವ ಸಂವಿಧಾನವಿದೆ. ಆದರೆ, ಎಲ್ಲರೂ ಪರಸ್ಪರ ಗೌರವ ಹಾಗೂ ಸಮಾನತೆಯಿಂದ ಬದುಕುವ ಸಂವಿಧಾನವನ್ನು ಭಾರತದಲ್ಲಿ ಮಾತ್ರ ಕಾಣಬಹುದು. ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮೆಲ್ಲರ ಹೆಮ್ಮೆ ಎಂದು ಅವರು ತಿಳಿಸಿದರು.
ಅಂಬೇಡ್ಕರ್ ಅವರ ಸ್ಮರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಪೂರ್ಣವಾಗಿ ಅನುಷ್ಠಾನಗೊಳ್ಳಬೇಕು. ಎಲ್ಲರೂ ಶಿಕ್ಷಣದಿಂದ ಉನ್ನತ ಸ್ಥಾನ ಪಡೆದು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದಾಗ ಮಾತ್ರ ಅಂಬೇಡ್ಕರ್ ರವರ ಕನಸು ನನಸಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ, ಪುಸ್ತಕಗಳು ಹಾಗೂ ವೃದ್ಧರಿಗೆ ಹೊದಿಕೆಗಳನ್ನು ನೀಡಲಾಯಿತು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸುಧಾ ವೆಂಕಟೇಶ್, ದಲಿತ ಮುಖಂಡ ಕೆ.ಸಿ.ರಾಜಾಕಾಂತ್, ಪ್ರೊಫೆಸರ್ ಶಂಕರ್ಡಾ, ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಪ್ರತಾಪ್ ರಾಜು, ಮಧುಸೂದನ್, ರಾಜೇಶ್, ರಾಜಶೇಖರ್, ರಾಮ್ ಸಾಗರ್, ನಾರಾಯಣ್, ಕೃಷ್ಣಂರಾಜು, ಗೋವಿಂದರಾಜು, ಗೋಪಾಲ್, ನರಸರಾಜ್, ಶಿಕ್ಷಕರಾದ ಶ್ರೀನಿವಾಸ್, ಮುನಿರಾಜು, ನಗರಸಭೆ ಸದಸ್ಯರಾದ ಜಾಫರ್, ಯತೀಶ್ ಬಾಬು, ಸತೀಶ್, ಸುಬ್ರಮಣ್ಯಾಚಾರಿ, ಮಿಲ್ಟನ್ ವೆಂಕಟೇಶ್, ಎಂ.ನಾಗೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.