Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್ (Addagal) ಮತ್ತು ಮಂಡಿಕಲ್ (Mandikal) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶುಕ್ರವಾರ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ವಿಜ್ಞಾನಿಗಳಾದ ರಮೇಶ್ ದಿಕ್ಪಾಲ್ ಮತ್ತು ಸಂತೋಷ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಭೂಕಂಪನದ (Earthquake) ಸಮಯದಲ್ಲಿ ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಕರಪತ್ರಗಳನ್ನು ನೀಡಿ ಜನರಲ್ಲಿ ಭೂಕಂಪನದ ಬಗ್ಗೆ ಗೊಂದಲಗಳನ್ನು ಪರಿಹರಿಸಿ ಆತ್ಮಸ್ಥೈರ್ಯ ತುಂಬಿದರು.
ವಿಜ್ಞಾನಿ ರಮೇಶ್ ದಿಕ್ಪಾಲ್ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಕಳೆದ 50 ವರ್ಷಗಳಲ್ಲಿ ಸುರಿಯದ ಮಳೆ ಸುರಿದಿದೆ. ಈ ಭಾರಿಮಳೆಯಿಂದ ಅಂತರ್ಜಲದಲ್ಲಿ ಬದಲಾವಣೆ ಆಗಿದ್ದು ಭೂಮಿಯ ಆಳಕ್ಕೆ ನೀರು ಇಳಿಯುತ್ತಿರುವುದರಿಂದ ಈ ರೀತಿಯ ಭೂಕಂಪನಗಳು ಈ ಭಾಗದಲ್ಲಿ ಸಂಭವಿಸಿವೆ. ಮುಂದಿನ ಒಂದು ತಿಂಗಳವರೆಗೂ ಇಂತಹ ಭೂಕಂಪನದ ಅಲೆಗಳು ಸದ್ದಿನೊಂದಿಗೆ ಕೇಳುವ ಸಾಧ್ಯತೆ ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯು ಭೂಕಂಪದ ವಲಯದಿಂದ ಬಹುದೂರವಿದ್ದು ಸುರಕ್ಷಿತ ವಲಯದಲ್ಲಿದೆ. ಆದ್ದರಿಂದ ಭೂಕಂಪ ಸಂಭವಿಸುವ ಸಾಧ್ಯತೆಗಳು ಕಡಿಮೆಯಿದೆ. ಕಳೆದ ಎರಡು ದಿನಗಳಿಂದ ಸಂಭವಿಸಿರುವ ಭೂಕಂಪನಗಳ ತೀವ್ರತೆ ಕನಿಷ್ಠ ಪ್ರಮಾಣದಲ್ಲಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನಿರಂತರವಾಗಿ ಈ ಭಾಗದ ಮೇಲೆ ನಿಗಾವಹಿಸಿದ್ದು . ಜನರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಎಂದು ಹೇಳಿದರು
ಭೂವಿಜ್ಞಾನಿಗಳಾದ ಕೃಷ್ಣವೇಣಿ, ಬಿ.ಎನ್.ಕೃಷ್ಣಮೂರ್ತಿ, ತಹಶೀಲ್ದಾರ್ ಗಣಪತಿಶಾಸ್ತ್ರಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹರ್ಷವರ್ಧನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.