Chikkaballapur: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2025ರ ಜನವರಿಯಿಂದ ಮಾರ್ಚ್ ತಿಂಗಳವರೆಗೆ ರಾಗಿ ಮತ್ತು ಬಿಳಿ ಜೋಳವನ್ನು ಸರ್ಕಾರ ಖರೀದಿಸಲಿದೆ. ರೈತರು ತಮ್ಮ ಹೆಸರು ನೋಂದಾಯಿಸಲು ಡಿಸೆಂಬರ್ 1ರಿಂದ ಪ್ರಕ್ರಿಯೆ ಆರಂಭವಾಗಲಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಕರೆ ನೀಡಿದರು.
ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. “ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ರಾಗಿ ಹಾಗೂ ಬಿಳಿ ಜೋಳ ಖರೀದಿಗೆ ಕೇಂದ್ರಗಳನ್ನು ತೆರೆಯಲು ಕ್ರಮ ತೆಗೆದುಕೊಳ್ಳಬೇಕು. ಖರೀದಿ ಆರಂಭದಲ್ಲಿ ರೈತರ ಹೆಸರು, ವಿಳಾಸ, ಕೃಷಿ ಇಲಾಖೆಯಿಂದ ನೀಡಲಾದ ಪ್ರೂಟ್ ಐಡಿ, ಪಹಣಿ, ಆಧಾರ್ ಪ್ರತಿ ಮತ್ತು ಮೊಬೈಲ್ ಸಂಖ್ಯೆಯನ್ನು ಖಚಿತಪಡಿಸಬೇಕು,” ಎಂದರು.
ನೋಂದಾಯಿತ ರೈತರಿಂದ ಮಾತ್ರ ಧಾನ್ಯ ಖರೀದಿಗೆ ಅವಕಾಶ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ವ್ಯಾಪಾರಿಗಳು ಅಥವಾ ದಲ್ಲಾಳಿಗಳಿಗೆ ಅವಕಾಶ ನೀಡಬಾರದು. ಪ್ರತಿ ಖರೀದಿ ಕೇಂದ್ರದಲ್ಲಿ ರಾಗಿಯನ್ನು ಸರಿಯಾಗಿ ಶೇಖರಣೆ ಮಾಡಿ, ಸರ್ಕಾರದ ನಿಗದಿತ ಚೀಲಗಳಲ್ಲಿ ಸರಿಯಾಗಿ ತುಂಬಬೇಕು.
ಈ ಸಭೆಯಲ್ಲಿ ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಉಪನಿರ್ದೇಶಕ ನಾಗರಾಜು ಕೆಳಗಿನಮನೆ, ಕೃಷಿ ಇಲಾಖೆ ಉಪನಿರ್ದೇಶಕಿ ಜಿ. ದೀಪಶ್ರಿ, ಕೆ.ಎಫ್.ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕ ವಿಜಯ್ ಕುಮಾರ್, ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಯಂತ್ರಕ ಎನ್. ಬೀನಾ ಸೇರಿದಂತೆ ಇನ್ನೂ ಹಲವರು ಪಾಲ್ಗೊಂಡರು.