Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ (International Day of Disabled Persons) ಉದ್ಘಾಟನೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ MTB ನಾಗರಾಜ್ ಅವರು ಮಾತನಾಡಿದರು.
ಅಂಗವಿಕಲರ ಸಬಲೀಕರಣಕ್ಕೆ ಸರ್ಕಾರ ಹಲವು ಸವಲತ್ತುಗಳನ್ನು ನೀಡುತ್ತಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 14,777 ಅಂಗವಿಕಲರಿಗೆ ₹ 1400, 8160 ಅಂಗವಿಕಲರಿಗೆ ಮಾಸಿಕ ₹ 800 ಹಾಗೂ 1,832 ಅಂಗವಿಕಲರಿಗೆ ಮಾಸಿಕ ₹ 2,000 ಮಾಸಾಶನ ನೀಡಲಾಗುತ್ತಿದೆ. ಶೇ 75 ರಷ್ಟು ವೈಕಲ್ಯ ಹೊಂದಿರುವವರಿಗೆ ಉಚಿತವಾಗಿ ಯಂತ್ರಚಾಲಿತ ದ್ವಿಚಕ್ರವಾಹನಗಳನ್ನು ಜಿಲ್ಲೆಯಲ್ಲಿ ವಿತರಿಸಲಾಗುತ್ತಿದೆ, ಅಂಗವಿಕಲರನ್ನು ವಿವಾಹವಾಗುವವರಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ನಿರುದ್ಯೋಗಿ ಅಂಗವಿಕಲರಿಗೆ ಮಾಸಿಕ ₹ 1,000 ನಿರುದ್ಯೋಗ ಭತ್ಯೆ ಮತ್ತು ಜಿಲ್ಲೆಯಲ್ಲಿ ಅಂಗವಿಕಲರ ಮಕ್ಕಳಿಗಾಗಿ ಎರಡು ವಿಶೇಷ ಶಾಲೆಗಳನ್ನು ಖಾಸಗಿ ಸಹಭಾಗಿತ್ವದಡಿ ನಡೆಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಮಾತನಾಡಿ, ಅಂಗವಿಕಲರು ಅನುಭವಿಸುವ ಸಮಸ್ಯೆಗಳನ್ನು ನಿವಾರಿಸಿ ಸಬಲೀಕರಣಗೊಳಿಸುವ ಆಶಯದೊಂದಿಗೆ ಅಂಗವಿಕಲರ ದಿನ ಆಚರಿಸಲಾಗುತ್ತದೆ. ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಎಲ್ಲರಂತೆ ಸಹಜ ಜೀವನ ನಡೆಸಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಸಚಿವರು ಶ್ರವಣ ದೋಷವುಳ್ಳವರಿಗೆ ಸಾಧನ, ಅಗತ್ಯವಿರುವವರಿಗೆ ಯಂತ್ರಚಾಲಿತ ದ್ವಿಚಕ್ರವಾಹನ, ಊರುಗೋಲು (ಸ್ಟಿಕ್), ಬ್ರೈಲ್ ಕಿಟ್ ಸೇರಿದಂತೆ ವಿವಿಧ ಸಲಕರಣೆಗಳನ್ನು ಸಚಿವರು ವಿತರಿಸಿದರು. ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಘ, ಸಂಸ್ಥೆಗಳು ಹಾಗೂ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್ (Zilla Panchayat CEO – P Shivashankar), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ (Police SP D L Nagesh), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅಶ್ವತ್ಥಮ್ಮ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಜ್ಯೋತಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.