Chikkaballapur : ಇಲ್ಲಿನ ಕನ್ನಡ ಭವನದಲ್ಲಿ ಆರಂಭವಾಗಿದ್ದ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಬುಧವಾರ ಭವ್ಯ ಸಮಾರೋಪದೊಂದಿಗೆ ಅಂತ್ಯವಾಯಿತು. ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷಾ ಬೆಳವಣಿಗೆ ಕುರಿತು ಉನ್ನತ ಮಟ್ಟದ ಚರ್ಚೆಗಳು ನಡೆಯಿದವು.
ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, “ಸಾಹಿತ್ಯ ಸಮ್ಮೇಳನಗಳು ಕನ್ನಡಕ್ಕೆ ಸಂಬಂಧಿಸಿದ ವಿವೇಕವನ್ನು ಜಾಗೃತಗೊಳಿಸಬೇಕು. ಕರ್ನಾಟಕದ ವಿಭಿನ್ನ ಭಾಗಗಳ ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಭಾಷಾ ಪರಂಪರೆಗಳನ್ನು ಅರ್ಥಮಾಡಿಕೊಳ್ಳಲು ಇವು ಪೂರಕವಾಗಬೇಕು,” ಎಂದು ಹೇಳಿದ್ದಾರೆ.
ವಚನಕಾರರು ದೇವರಿಗೆ ಕನ್ನಡ ಕಲಿಸಿದ ಮಹತ್ವವನ್ನು ನೆನೆದು, ದೇವರಿಗೆ ಭಾಷೆ ಕಲಿಸುವಷ್ಟು ಶಕ್ತಿಯ ವಿವೇಕ ನಮ್ಮಲ್ಲಿರಬೇಕು ಎಂದರು. “ಹೊರರಾಜ್ಯದವರು ಇಲ್ಲಿಗೆ ಬಂದು ವ್ಯವಹಾರ ಮಾಡುತ್ತಿರುವಾಗ ನಾವೇ ಅವರ ಭಾಷೆ ಕಲಿಯುತ್ತೇವೆ. ನಾವು ಶಾಂತಿಪ್ರಿಯರು. ಆದರೆ, ಭಾಷಾ ವಿಚಾರದಲ್ಲಿ ದಾಳಿಗಳನ್ನು ಸಹಿಸಬಾರದು” ಎಂದು ಹೇಳಿದರು.
ಸಾನ್ನಿಧ್ಯವಹಿಸಿದ್ದ ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, “ಕನ್ನಡ ಭಾಷೆಗೆ ಉದ್ಯೋಗದ ಭರವಸೆ ಇದ್ದರೆ ಮಾತ್ರ ಅದು ಬೆಳೆಯುತ್ತದೆ. ಇಂಗ್ಲಿಷ್‌ಗೆ ವ್ಯಾಪಾರಿ ಮೌಲ್ಯವಿದ್ದರೆ, ಕನ್ನಡಕ್ಕೂ ಆ ಶಕ್ತಿಯನ್ನು ನೀಡಬೇಕಾಗಿದೆ. ಇದಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಅಗತ್ಯ” ಎಂದರು.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಪ್ರದೇಶಗಳಲ್ಲಿ ತೆಲುಗು ಭಾಷೆ ಪ್ರಬಲವಾಗಿದ್ದರೂ, ಗೂಳೂರು ಮಠದವರು ಕನ್ನಡ ಶಿಕ್ಷಣ ಮತ್ತು ಸಾಮಾಜಿಕ ಬದಲಾವಣೆಗೆ ಮಾಡಿದ ಸೇವೆಗಳನ್ನು ಅವರು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, “ವಿಶ್ವೇಶ್ವರಯ್ಯ ಮತ್ತು ಸಿಎನ್‌ಆರ್ ರಾವ್ ಮುಂತಾದ ಮಹಾನ್ ವ್ಯಕ್ತಿಗಳು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಈ ನಾಡಿನಲ್ಲಿ ತೆಲುಗು ಮತ್ತು ಕನ್ನಡದ ಬ್ರಾತೃತ್ವ ಇದೆ. ಭಾಷೆಗೆ ಆತಂಕದ ದಿನಗಳು ಬರದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ” ಎಂದು ಹೇಳಿದರು.
ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, “ಇಂದಿನ ಮಕ್ಕಳಿಗೆ ಕನ್ನಡದಲ್ಲಿ ಒಂದು ಸರಿಯಾದ ವಾಕ್ಯ ಬರೆಯಲು ಕಷ್ಟವಾಗಿದೆ. ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಎಲ್ಲರೂ ಸೇರಿ ಕೆಲಸ ಮಾಡಬೇಕು” ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಕನ್ನಡದಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳ ಜೊತೆಗೆ ಪದವಿ ಮಟ್ಟದಲ್ಲಿ ಕನ್ನಡದಲ್ಲಿ ಶೇಕಡಾ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಮ್ಮೇಳನಾಧ್ಯಕ್ಷ ಗೋಪಾಲಗೌಡ ಕಲ್ವಮಂಜಲಿ, ಜಿಲ್ಲಾ ಪರಿಷತ್ ಅಧ್ಯಕ್ಷ ಪ್ರೊ. ಕೋಡಿ ರಂಗಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಕಸಾಪ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
