Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಬುಧವಾರ ನಡೆದ ಚಿಕ್ಕಬಳ್ಳಾಪುರ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯ ನಿರ್ವಹಣಾಧಿಕಾರಿಗಳ ಪ್ರಾದೇಶಿಕ ಸಭೆ (Regional Meeting) ನಡೆಯಿತು. ಸಭೆಯಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (KOCHIMUL) ವಿಭಜನೆಯ ವಿಚಾರ ಸದ್ದು ಮಾಡಿತು.
ಕೆಲವು ಡೇರಿ ಅಧ್ಯಕ್ಷರು ವಿಭಜನೆಯಾದ ಒಕ್ಕೂಟದ ಆದೇಶವನ್ನು ವಾಪಸ್ ಪಡೆದಿದ್ದು ಏಕೆ ಎಂದು ಪ್ರಶ್ನಿಸಿ ಮುಂಬರುವ ಕೋಚಿಮುಲ್ ಸಾಮಾನ್ಯ ಸಭೆಯಲ್ಲಿ ವಿಭಜನೆಗೆ ಮನಸ್ಸು ಮಾಡಿ. ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಅಗತ್ಯ ಎಂದು ಪ್ರತಿಪಾದಿಸಿದರು. ಕೋಚಿಮುಲ್ ರೈತರು ಪೂರೈಸುವ ಒಂದು ಲೀಟರ್ ಹಾಲಿನ ಬೆಲೆಯನ್ನು ₹2.50 ಕಡಿತ ಮಾಡಿದ್ದು ಈ ಕಡಿತವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮರಳುಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ “ಡಾ.ಕೆ.ಸುಧಾಕರ್ ಅವರು ಮುಖ್ಯಮಂತ್ರಿ ಅವರ ಮೇಲೆ ಒತ್ತಡ ತಂದು ವಿಭಜನೆ ಮಾಡಿಸಿದರು. ಹಾಲು ಒಕ್ಕೂಟಕ್ಕೆ ಮುಂದಿನ ಚುನಾವಣೆ ನಡೆಯವ ವೇಳೆಗಾದರೂ ಪ್ರತ್ಯೇಕ ಒಕ್ಕೂಟ ರಚಿಸಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಹೆಸರಿನಲ್ಲಿಯೇ ಚುನಾವಣೆಯ ನಡೆಯಬೇಕು” ಎಂದು ಹೇಳಿದರು.
ಸಭೆಯಲ್ಲಿ ಕೋಚಿಮುಲ್ ನಿರ್ದೇಶಕಿ ಸುನಂದಮ್ಮ ಹಾಗೂ ವಿವಿಧ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಒಕ್ಕೂಟದ ಅಧಿಕಾರಿಗಳು ಪಾಲ್ಗೊಂಡಿದ್ದರು.