ಜಿಲ್ಲೆಯಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸಲು ಮತ್ತೆ ಮೇ 27 ರಿಂದ 30 ವರೆಗೆ ೪ದಿನಗಳ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.
ಮೇ 24 ರಿಂದ ಮೇ 26 ರವರೆ ಮಾತ್ರ ಸರ್ಕಾರವು ನಿಗದಿಪಡಿಸಿರುವಂತೆ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುತ್ತದೆ. ಗುರುವಾರ ಮೇ 27 ರಿಂದ ಭಾನುವಾರದವರೆಗೆ ಮತ್ತೆ ಸಂಪೂರ್ಣ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಜಾರಿಗೊಳಿಸಿರುವ ಸಂಪೂರ್ಣ ಲಾಕ್‌ಡೌನ್ ಪರಿಣಾಮಕಾರಿಯಾಗಿದೆ ಎಂದು ನನ್ನ ಅನಿಸಿಕೆ. ಅದರ ಫಲಿತಾಂಶ ನಾಲ್ಕೈದು ದಿನಗಳಲ್ಲಿ ತಿಳಿಯಲಿದೆ ಎಂದು ಅವರು ಹೇಳಿದರು.
ಸೋಮವಾರ, ಮಂಗಳವಾರ ಬುಧವಾರ ಅಗತ್ಯ ಸೇವೆಗಳಿಗೆ ಬೆಳಿಗ್ಗೆ 6 ರಿಂದ 10 ರವರೆಗೆ ಸಮಯ ನಿಗದಿ ಮಾಡಲಾಗಿದೆ. ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಪೂರ್ಣ ಲಾಕ್‌ಡೌನ್ ಜಾರಿಯಲ್ಲಿ ಇರುತ್ತದೆ. ಈ ವೇಳೆ ಬೆಳಿಗ್ಗೆ ನಂದಿನಿ ಹಾಲಿನ ಮಾರಾಟ ಹೊರತುಪಡಿಸಿ ಅಗತ್ಯ ವಸ್ತುಗಳ ಮಾರಾಟಕ್ಕೂ ಅವಕಾಶವಿರುವುದಿಲ್ಲ ಎಂದು ಮಾಹಿತಿ ನೀಡಿದರು.
ಪೂರ್ಣ ಲಾಕ್‌ಡೌನ್ ವೇಳೆ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳ ಸಮೀಪದ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಇರುತ್ತದೆ. ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪೆಟ್ರೋಲ್ ಬಂಕ್‌ಗಳು ಮಾತ್ರ ತೆರೆದಿರುತ್ತವೆ. ಚಿಂತಾಮಣಿ ಮತ್ತು ಬಾಗೇಪಲ್ಲಿಯಲ್ಲಿ ಶುಕ್ರವಾರ ಮತ್ತು ಭಾನುವಾರ ಟೊಮೆಟೊ ವಹಿವಾಟಿಗೆ ಮಾತ್ರ ಅವಕಾಶವಿರರು ಉಳಿದಂತೆ ಎಪಿಎಂಸಿಗಳು ಸಹ ಬಂದ್ ಆಗಲಿವೆ ಎಂದು ತಿಳಿಸಿದರು.
ಅಗತ್ಯ ಸೇವೆಗಳು ದೊರೆಯುವ ಸಂದರ್ಭದಲ್ಲಿ ಜನದಟ್ಟಣೆ ಉಂಟಾಗುತ್ತಿದೆ. ಅಂತಹ ಸ್ಥಳಗಳಲ್ಲಿ ಅಂತರ ಕಾಪಾಡಿಕೊಳ್ಳುವ ಬಗ್ಗೆ ನೋಡಿಕೊಳ್ಳುವಂತೆ ಎಲ್ಲಾ ಪಿಡಿಒ ಗಳಿಗೆ ಸೂಚಿಸಿದ್ದೇವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಕಡಿಮೆ ಆಗಿಲ್ಲ. ನಗರಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ 3 ಪಟ್ಟು ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಈ ಕಾರಣದಿಂದ ಹಳ್ಳಿಗಳಲ್ಲಿನ ಟಾಸ್ಕ್‌ಪೋರ್ಸ್ ಚುರುಕುಗೊಳಿಸಿ ಟಾಸ್ಕ್‌ಪೋರ್ಸ್ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸುವಂತೆ ತಿಳಿಸಿದ್ದೇವೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಿ ದಿನನಿತ್ಯ ಮಾಹಿತಿ ಪಡೆಯುತ್ತಿದ್ದೇವಲ್ಲದೆ ಸ್ವತಃ ನಾನು, ಜಿಲ್ಲಾ ಪಂಚಾಯಿತಿ ಸಿಇಒ, ಎಸ್‌ಪಿ, ಉಪವಿಭಾಗಾಧಿಕಾರಿ, ತಹಶೀಲ್ದಾರರು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು.
ಸೋಂಕು ಹರಡುವಿಕೆ ಖಂಡಿತವಾಗಿ ಕಡಿಮೆ ಆಗಿದೆ. ನಗರಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಆಗಬೇಕಿದೆ. ಈ ದೃಷ್ಟಿಯಲ್ಲಿ ನೋಡುವುದಾರರೆ ಪೂರ್ಣ ಲಾಕ್‌ಡೌನ್ ಒಳ್ಳೆಯ ನಿರ್ಧಾರ ಎಂದು ಹೇಳಿದರು.
ಹೋಂ ಐಸೊಲೇಷನ್‌ನಲ್ಲಿ ಇರುವವರಿಗೆ ಪ್ರತ್ಯೇಕವಾದ ಶೌಚಾಲಯ ಮತ್ತು ಕೊಠಡಿ ವ್ಯವಸ್ಥೆ ಇರಬೇಕು. ಇಲ್ಲವಾದರೆ ಕುಟುಂಬ ಸದಸ್ಯರಿಗೆ ಸೋಂಕು ಹರಡುವ ಅವಕಾಶ ಹೆಚ್ಚಾಗಿ ಇರುವುದರಿಂದ ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗುವುದು. ಹಿಂದೆ ಕೋವಿಡ್ ಕೇರ್ ಸೆಂಟರ್‌ನಲ್ಲಿ 336 ಜನರು ಮಾತ್ರ ಇದ್ದರು. ಈ ನಿಯಮಗಳನ್ನು ಕಡ್ಡಾಯಗೊಳಿಸಿದ ನಂತರ ಪ್ರಸ್ತುತ ಕೋವಿಡ್ ಕೇರ್ ಸೆಂಟರ್‌ನಲ್ಲಿ 1,500 ಜನರು ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.