Chikkaballapur : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ, ಚಿಕ್ಕಬಳ್ಳಾಪುರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿದರು.
ವಾಲ್ಮೀಕಿ ಜನಾಂಗ ನಿಷ್ಠೆ, ಪ್ರಾಮಾಣಿಕತೆಗೆ ಹೆಸರುವಾಸಿ. ಶಬರಿ, ಏಕಲವ್ಯ, ಬೇಡರ ಕಣ್ಣಪ್ಪ, ಒನಕೆ ಓಬವ್ವ, ಸುರಪುರದ ನಾಯಕರು, ಎಲ್ಲರೂ ವಾಲ್ಮೀಕಿ ಸಮುದಾಯಕ್ಕೆ ಸೇರಿದ ದಿವ್ಯ ಸ್ವರೂಪರು. ಜ್ಞಾನದಿಂದಾಗಿ ವಿಕಾಸ ಸಾಧ್ಯ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು ವಾಲ್ಮೀಕಿಯ ಪರಿಶಿಷ್ಟ ಜನಾಂಗ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರುವ ಪ್ರಯತ್ನ ಮಾಡಬೇಕು. ಪರಿಶಿಷ್ಟ ಪಂಗಡದೊಂದಿಗೆ ಸರ್ಕಾರ ಸದಾ ಇರುತ್ತದೆ. ನನ್ನ ಜೀವ ಇರುವವರೆಗೂ ಜನಾಂಗದ ಶ್ರೇಯಸ್ಸಿಗೆ ಕೆಲಸ ಮಾಡುತ್ತೇನೆ ಎಂದರು.
ಜಿಲ್ಲೆಯ ಬಲಹೀನರಿಗೆ ವಾಸಕ್ಕೆ ನಿವೇಶನ ನೀಡಲು ಫಲಾನುಭವಿಗಳ ಪಟ್ಟಿ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಳವೆಬಾವಿ, ಸಾಲ ಸೌಲಭ್ಯ, ಕಿಸಾನ್ ಸಮ್ಮಾನ್ ಮುಂತಾದ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಯಾಗಬೇಕು ಎಂದು ತಿಳಿಸಿದರು.
ಯಾವುದೇ ಸರ್ಕಾರ ಮಾಡದ ಕೆಲಸವನ್ನು ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಮಾಡುತ್ತಿದೆ. ಎಪಿಎಂಸಿಯನ್ನು ಸ್ವತಂತ್ರಗೊಳಿಸಿ ದಲ್ಲಾಳಿಗಳಿಂದ ರೈತರನ್ನು ಮುಕ್ತರನ್ನಾಗಿಸಿ ಕಿಸಾನ್ ಸಮ್ಮಾನ್ ನಂತಹ ಯೋಜನೆಯ ಮೂಲಕ ರೈತರ ಖಾತೆಗೆ ಹಣ ನೀಡಲಾಗುತ್ತಿದೆ. ಪರಿಶಿಷ್ಟ ಸಮುದಾಯಕ್ಕೆ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಿಂದ ಸ್ವಯಂ ಉದ್ಯೋಗಕ್ಕೆ ಸಾಲ ನೀಡುತ್ತಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೈತ ವಿರೋಧಿ ಎಂದು ಟೀಕೆ ಮಾಡಲಾಗುತ್ತಿದೆ.
ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಉಚಿತ ಗುಣಮಟ್ಟದ ಆರೋಗ್ಯ ಸೇವೆ ನೀಡಲು ವೈದ್ಯಕೀಯ ಕಾಲೇಜು ಆರಂಭವಾಗಲಿದೆ. ಎಂದರು.
ಜಿಲ್ಲೆಯಲ್ಲಿ ಹೈನುಗಾರಿಕೆ ಉಪಕಸುಬಾಗಿದ್ದು, ಇದಕ್ಕಾಗಿ ಕೋಮುಲ್ ವಿಭಜಿಸಬೇಕಿದೆ. ಆದರೆ ಕೆಲ ಸ್ವಾರ್ಥಿಗಳು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ವಾಲ್ಮೀಕಿ ಸಮುದಾಯದ ಮುಖಂಡರಾದ ಆವುಲಕೊಂಡರಾಯಪ್ಪ ವಾಲ್ಮೀಕಿ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.