Chikkaballapur : ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಪ್ರಯುಕ್ತ ಮುದ್ದೇನಹಳ್ಳಿಯಲ್ಲಿ ಸರ್ ಎಂ.ವಿ ಅವರ ಪುತ್ಥಳಿಗೆ ಜಿಲ್ಲಾಡಳಿತದಿಂದ ಗೌರವ ಸಲ್ಲಿಸಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.
ಮುದ್ದೇನಹಳ್ಳಿಯಲ್ಲಿನ ಅಭಿವೃದ್ಧಿ ಹಾಗೂ ಉಸ್ತುವಾರಿ ಕಾರ್ಯಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನೋಡಿಕೊಳ್ಳುತ್ತಿದೆ. ಕುಟುಂಬದವರ ಅಭಿಪ್ರಾಯ ಪಡೆದು ಮುದ್ದೇನಹಳ್ಳಿಯ ಸರ್ ಎಂ.ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ ಅಭಿವೃದ್ಧಿ ಹಾಗೂ ಅವರ ಜನ್ಮಸ್ಥಳದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಂಗಟ್ಟ ಬಳಿ ₹ 14.9 ಕೋಟಿ ವೆಚ್ಚದಲ್ಲಿ ಏಷ್ಯಾದಲ್ಲೇ ಏಕೈಕ ಹಾಗೂ ಮೊದಲ ಕೌಶಲ ತರಬೇತಿ ಸಂಸ್ಥೆಯಾದ ಸರ್ ಎಂ.ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಇನ್ಸಿಟ್ಯೂಟ್ ಫಾರ್ ಸೂಪರ್ ಟ್ರೈನರ್ಸ್ ಸಂಸ್ಥೆಯ ಕಟ್ಟಡ ಕಾಮಗಾರಿ ನಡೆಯುತ್ತಿದೆ. 2022ಕ್ಕೆ ಉದ್ಘಾಟನೆ ಆಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ರಾಷ್ಟ್ರನಿರ್ಮಾಣದಲ್ಲಿ ವಿಶ್ವೇಶ್ವರಯ್ಯ ಅವರು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ನಾಡಿನ ಕೀರ್ತಿಯನ್ನು ಜಗತ್ತಿಗೆ ಪರಿಚಯಿಸಿದ ವಿಶ್ವೇಶ್ವರಯ್ಯ ಅವರ ಜನ್ಮಭೂಮಿಯಲ್ಲಿ ನಾವು ಇದ್ದೇವೆ ಎನ್ನುವುದೇ ಹೆಮ್ಮೆಯ ವಿಚಾರ. ಅವರು ನಮ್ಮ ಜಿಲ್ಲೆಯವರೇ ಆಗಿರುವುದು ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸರ್ ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ತಹಶೀಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.