Chikkaballapur : ಜನವರಿ 7 ರಿಂದ 14 ರ ವರೆಗೂ ನಡೆಯಲಿರುವ ಚಿಕ್ಕಬಳ್ಳಾಪುರ ಉತ್ಸವದ ಗೀತೆಯನ್ನು (Chikkaballapura Utsava) ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ (K. Sudhakar) ಬಿಡುಗಡೆಗೊಳ್ಳಿಸಿದರು.
ಚಿಕ್ಕಬಳ್ಳಾಪುರ ಉತ್ಸವ ಗೀತೆ
ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು “ಮೈಸೂರು ದಸರಾ (Mysuru Dasara), ಹಂಪಿ ಉತ್ಸವ (Hampi utsav), ಕರಾವಳಿ ಮತ್ತು ಕಾರ್ಕಳ ಉತ್ಸವಗಳಂತೆಯೇ 2023 ರ ಜನವರಿ 7 ರಿಂದ ಜನವರಿ 14ರ ವರೆಗೆ ನಡೆಯುವ ಚೊಚ್ಚಲ “ಚಿಕ್ಕಬಳ್ಳಾಪುರ ಉತ್ಸವ”ದ ಪೂರ್ವ ಸಿದ್ಧತಾ ಕಾರ್ಯಗಳು ಅಂತಿಮ ಹಂತದಲ್ಲಿವೆ. ಜನವರಿ 7 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಎಂ.ಜಿ.ರಸ್ತೆಯ ಮರಳುಸಿದ್ದೇಶ್ವರ ದೇವಾಲಯದಿಂದ ಮೆರವಣಿಗೆ ಮೂಲಕ ಕಾರ್ಯಕ್ರಮ ಆರಂಭವಾಗಲಿದ್ದು ಮೆರವಣಿಗೆಯಲ್ಲಿ ದೇಶ-ರಾಜ್ಯಗಳಿಂದ, ಸ್ಥಳೀಯ ಕಲಾತಂಡಗಳನ್ನು ಒಳಗೊಂಡಂತೆ 3000 ಕ್ಕೂ ಹೆಚ್ಚು ಕಲಾತಂಡಗಳು, ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಬಿಂಬಿಸುವ 21 ಸ್ತಬ್ಧ ಚಿತ್ರಗಳು ಸಾಗಲಿದೆ” ಎಂದು ತಿಳಿಸಿದರು.
ಸಂಜೆ ಚಿಕ್ಕಬಳ್ಳಾಪುರ ಉತ್ಸವದ ಚಾಲನೆಯ ವೇದಿಕೆ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಶ್ರೀಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ (Nirmalanandanatha Swamiji) ಹಾಗೂ ಧರ್ಮಸ್ಥಳ ಮಹಾಸಂಸ್ಥಾನದ ಡಾ.ವೀರೇಂದ್ರ ಹೆಗ್ಗಡೆ (Veerendra Heggade) ಅವರೊಟ್ಟಿಗೆ ಚಾಲನೆ ನೀಡಲಿದ್ದು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜು ಬೊಮ್ಮಾಯಿ (Basavaraj Bommai), ಸಚಿವರುಗಳಾದ ಮುನಿರತ್ನ, ಆನಂದಸಿಂಗ್, ಸುನೀಲ್ ಕುಮಾರ್, ಎನ್.ನಾಗರಾಜು (MTB), ವಿಶೇಷವಾಗಿ ಖ್ಯಾತ ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ್ (Sudeep) ಸೇರಿ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.
ಪ್ರತಿನಿತ್ಯ ಕಾರ್ಯಕ್ರಮಗಳು ನಡೆಯುವ ಸ್ಥಳ, ವೇಳಾಪಟ್ಟಿ ಸೇರಿದಂತೆ ಇನ್ನಿತರ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಲು https://chikkaballapurautsava.com/ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಸುದ್ಧಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜು, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.