Chikkaballapur : ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಗುರುವಾರ ಚಿಕ್ಕಬಳ್ಳಾಪುರ ನಗರದಲ್ಲಿ ‘ಮಕ್ಕಳ ಹಕ್ಕುಗಳು ಮತ್ತು ಕಾನೂನು’ (Children Rights Workshop) ಕುರಿತ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ “ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಮಟ್ಟದಲ್ಲಿ ಬಾಲ್ಯವಿವಾಹ ತಡೆಗಟ್ಟುವ ಸಮಿತಿಗಳು ಅಸ್ತಿತ್ವದಲ್ಲಿದ್ದು ತಾಲ್ಲೂಕು ಮಟ್ಟದ ಸಮಿತಿಗಳ ಸಭೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ಮೂರು ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ನಡೆಸ ಬೇಕು. ಒಂದು ವೇಳೆ ಬಾಲ್ಯವಿವಾಹ ನಡೆದಿದ್ದರೆ ಅದಕ್ಕೆ ಪ್ರೋತ್ಸಾಹಿಸಿದ ಪೋಷಕರು, ಸಂಬಂಧಿಕರು, ಕಲ್ಯಾಣ ಮಂಟಪದ ಮಾಲೀಕರು, ಪುರೋಹಿತರನ್ನು ಕಾನೂನು ಕ್ರಮಕ್ಕೆ ಒಳಪಡಿಸಿ ಅಂತಹ ಮಕ್ಕಳ ಪುನರ್ ವಸತಿಗೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಬಾಲ್ಯ ವಿವಾಹವಾದರೆ 20 ವರ್ಷ ಜೈಲು ಶಿಕ್ಷೆ ಎಂಬುದನ್ನು ಹೆಚ್ಚು ಪ್ರಚಾರಗೊಳಿಸಬೇಕು. ಬಾಲ್ಯ ವಿವಾಹಗಳನ್ನು ಪೂರ್ಣವಾಗಿ ನಿಯಂತ್ರಿಸಬೇಕು” ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಅರುಣಾ ಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮರಾಜ್ ಅರಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಚಂದ್ರಪ್ಪ, ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.