Appegowdanahalli, Sidlaghatta : ಹಸಿರು ವೃದ್ಧಿಸುವ ಕಾಯಕದ “ಉಸಿರಿಗಾಗಿ ಹಸಿರು ಟ್ರಸ್ಟ್” ವತಿಯಿಂದ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಹಸಿರು ಕ್ರಾಂತಿಯ ಹರಿಕಾರ ದಿವಂಗತ ಡಾ. ಎಂ. ಎಸ್. ಸ್ವಾಮಿನಾಥನ್ ರವರ ಸ್ಮರಣಾರ್ಥ ಮಕ್ಕಳ ಗ್ರಂಥಾಲಯವನ್ನು ಶುಕ್ರವಾರ ಸ್ಥಾಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಸಿರಿಗಾಗಿ ಹಸಿರು ಟ್ರಸ್ಟ್ ನ ಕಾರ್ಯಕಾರಿ ಟ್ರಸ್ಟಿ ಎನ್.ಗಂಗಾಧರ ರೆಡ್ಡಿ, ಆರೋಗ್ಯಕರ ಸಮಾಜಕ್ಕಾಗಿ ಪರಿಸರ ಹಾಗೂ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಉಸಿರಿಗಾಗಿ ಹಸಿರು ಟ್ರಸ್ಟ್ ಕಳೆದ ಒಂಭತ್ತು ವರ್ಷಗಳಲ್ಲಿ ಬಯಲುಸೀಮೆಯ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಶಾಲೆಗಳನ್ನು ಹಸಿರು ಶಾಲೆಗಳನ್ನಾಗಿ ಪರಿವರ್ತಿಸಿದೆ. ಉಸಿರಿಗಾಗಿ ಹಸಿರು ತಂಡದ ಸದಸ್ಯರು ನೆಟ್ಟ ಸಸಿಗಳನ್ನು ಪೋಷಿಸಿ ಸಂರಕ್ಷಿಸಿದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ವಸತಿ ಶಾಲೆಗಳಲ್ಲಿ ಮಕ್ಕಳ ಗ್ರಂಥಾಲಯವನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಎರಡು ವರ್ಷದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳಲ್ಲಿ ಒಟ್ಟು ಐದು ಗ್ರಂಥಾಲಯಗಳನ್ನು ಸ್ಥಾಪಿಸಿದ್ದೇವೆ. 500 ಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಾಲಯದಲ್ಲಿ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತಹ ಕನ್ನಡ, ಆಂಗ್ಲ ಹಾಗೂ ಹಿಂದಿ ಭಾಷೆಯ ನೀತಿಕಥೆ, ಪರಿಸರ, ವಿಜ್ಞಾನ ವಿಸ್ಮಯ, ಕಲೆ, ಸಾಹಿತ್ಯ, ಕವಿ, ವಿಜ್ಞಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ, ವ್ಯಾಕರಣ, ಶಬ್ದಕೋಶ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಹೊಂದಿದೆ. ಶಾಲಾವರಣಗಳನ್ನು ಹಸಿರುಮಯಗೊಳಿಸಿದ ಮಕ್ಕಳ ಜ್ಞಾನಾರ್ಜನೆಗೆ ಗ್ರಂಥಾಲಯವನ್ನು ಕೊಡುಗೆಯಾಗಿ ನೀಡುತ್ತಿದ್ದು, ಅದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ರೈತ ಎ.ಎಂ.ತ್ಯಾಗರಾಜು, ಮಕ್ಕಳ ಬೌದ್ಧಿಕ ವಿಕಾಸದಲ್ಲಿ ಪುಸ್ತಕಗಳ ಪಾತ್ರ ಅಪಾರ. ಓದುವ ಹವ್ಯಾಸದಿಂದ ವ್ಯಕ್ತಿಯ ಜ್ಞಾನ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ. ಮಕ್ಕಳಲ್ಲಿ ಅಂತಹ ಹವ್ಯಾಸವನ್ನು ರೂಢಿಸುವ ಉದ್ದೇಶದಿಂದ ಉರಿಸಿಗಾಗಿ ಹಸಿರು ಟ್ರಸ್ಟ್ ಕೈಗೊಂಡ ಕಾರ್ಯ ಶ್ಲಾಘನೀಯ ಹಾಗೂ ಅರ್ಥಗರ್ಭಿತ. ಕಲಿಯುವ ಆಸಕ್ತಿಯನ್ನು ಕೆರಳಿಸುವ ವಿವಿಧ ಬಗೆಯ ಪುಸ್ತಕಗಳು ಗ್ರಂಥಾಲಯದಲ್ಲಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡವರೆಲ್ಲರೂ ಪ್ರಜ್ಞಾವಂತರಾಗುವುದರಲ್ಲಿ ಸಂದೇಹವಿಲ್ಲ. ಕಲಿಕೆಗೆ ಉತ್ತಮ ಪುಸ್ತಕ ಹಾಗೂ ಒಳ್ಳೆಯ ಪರಿಸರ ಪೂರಕವಾಗಿದ್ದು, ನೀವೆಲ್ಲರೂ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು. ಆದ್ದರಿಂದ ನೀವು ನಿಮ್ಮ ಜನ್ಮ ದಿನಾಚರಣೆಯನ್ನು ಸಸಿ ನೆಡುವುದರ ಮೂಲಕ ಆಚರಿಸಬೇಕು ಎಂಬ ಕಿವಿ ಮಾತು ಹೇಳಿದರು.
ರೇಣುಮಾಕಲಹಳ್ಳಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಡಿ.ಜಿ.ಗಂಗಾರಾಜ, ಉಸಿರಿಗಾಗಿ ಹಸಿರು ಟ್ರಸ್ಟ್‌ನ ಟ್ರಸ್ಟಿ ಸಿ.ಎಲ್.ವೆಂಕಟರೆಡ್ಡಿ, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲೆ ವಿಜಯಶ್ರೀ, ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.