Chintamani : ಚಿಂತಾಮಣಿ ನಗರದ ಜೋಡಿ ರಸ್ತೆಯ ಸ್ವಾಭಿಮಾನಿ ಸೇನೆಯ ಕಚೇರಿಯಲ್ಲಿ ಭಾನುವಾರ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಐಕ್ಯತಾ ಸಮಾವೇಶದ (Aikyata Samavesha) ಕರಪತ್ರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ರಾಜ್ಯ ಕಾರ್ಯದರ್ಶಿ ತಿಮ್ಮಸಂದ್ರ ರಾಜೇಂದ್ರಬಾಬು ” ನವಂಬರ್ 25 ರಂದು ಸೋಮವಾರ ಬೆಳಗ್ಗೆ ಬೆಂಗಳೂರಿನ ವಸಂತ ನಗರದಲ್ಲಿರುವ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ನೇತೃತ್ವದಲ್ಲಿ ರಾಜಕೀಯ ಜಾಗೃತಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶ ಆಯೋಜಿಸಲಾಗಿದೆ. ಅಂಬೇಡ್ಕರ್ ಅಭಿಪ್ರಾಯದಂತೆ ಅಧಿಕಾರಹೀನ ಸಮಾಜದ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಲೇ ಇರುತ್ತವೆ. ದಾಸ್ಯ ಬದುಕಿನಲ್ಲಿ ಜೀವಿಸುವುದಕ್ಕಿಂತ ತಾಯಿ ಗರ್ಭದಲ್ಲಿ ಸಾಯುವುದೇ ಲೇಸು ಎಂಬಂತೆ ಕೆಳಸ್ಥರದ ದಲಿತ ಸಮುದಾಯದ ಕೆಲವರಲ್ಲಿ ಸ್ವಾಭಿಮಾನವೇ ಸತ್ತುಹೋಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಮೂಲ ನಿವಾಸಿಗಳಾದ ದಲಿತರನ್ನು ಬೇರೆ ಬೇರೆ ಆಯಾಮಗಳಲ್ಲಿ ಬೇಕಾದಂತೆ ಬಳಸಿಕೊಳ್ಳುತ್ತಿರುವುದು ದುರಂತ” ಎಂದು ತಿಳಿಸಿದರು.
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಂಠ, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಘಟಕದ ಖಜಾಂಚಿ ಗೋವಿಂದರಾಜು, ಕಾರ್ಯದರ್ಶಿ ಅಂಬರೀಶ್, ಮಂಜುನಾಥ್, ಎಂ.ಗೊಲ್ಲಹಳ್ಳಿ ಮಲ್ಲಿಕಾರ್ಜುನ್, ಚಿನ್ನಸಂದ್ರ ಶಂಕರಪ್ಪ, ಉಮೇಶ್, ಲಕ್ಕೇನಹಳ್ಳಿ ನವೀನ್, ಮೈಲಾಂಡ್ಲಹಳ್ಳಿ ಶಿವರಾಜ್, ಪವನ್, ತಿಮ್ಮಸಂದ್ರ ವಾಸು, ಶೆಟ್ಟಿಹಳ್ಳಿ ವೆಂಕಟೇಶ್, ಸೀಕಲ್ಲು ದೇವರಾಜು ಹಾಜರಿದ್ದರು.