Chintamani : ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯಿಂದ (Anganwadi Workers) ಸೋಮವಾರ ಚಿಂತಾಮಣಿ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಸಹಾಯಕಿಯರಿಗೆ ನೀಡಿರುವ ಪದೋನ್ನತಿ ಬಗ್ಗೆ ಯಾವುದೇ ತನಿಖೆ ಅಗತ್ಯವಿಲ್ಲ. ಪದೋನ್ನತಿಯ ಆದೇಶವನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿ ಪ್ರತಿಭಟನೆ (protest) ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಸಿಐಟಿಯು ನೇತೃತ್ವದ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪದೋನ್ನತಿ ಮೂಲಕ ಭರ್ತಿ ಮಾಡಿರುವುದಲ್ಲಿ ಇಲಾಖೆಯ ನೀತಿ, ನಿಯಮಗಳನ್ನು ಗಾಳಿಗೆ ತೂರಿ ಅನರ್ಹರಿಗೆ ಬಡ್ತಿ ನೀಡಿ, ಅರ್ಹರಿಗೆ ಅನ್ಯಾಯ ಮಾಡಲಾಗಿದೆ. ತನಿಖೆ ನಡೆಸಿ ಪದೋನ್ನತಿಯನ್ನು ರದ್ದುಪಡಿಸಬೇಕು. ಸಮಗ್ರವಾಗಿ ತನಿಖೆ ನಡೆಸಿ ಅನ್ಯಾಯವಾಗಿದ್ದರೆ ಪದೋನ್ನತಿಯನ್ನು ರದ್ದು ಮಾಡಬೇಕು ಎಂದು ಕಳೆದ 2 ತಿಂಗಳ ಹಿಂದೆ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.
ಪ್ರತಿಭಟನೆಯಲ್ಲಿ ವಿ.ಅನಿತಮ್ಮ, ನವೀನ, ಮಂಜುಳ, ನಾಗಮಣಿ, ಮಮತ, ಸುಜಾತ, ವನಿತಾ, ಜಹರಾ, ವರಲಕ್ಷ್ಮಿ ಸೇರಿ ಅನೇಕ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.