Chintamani : ಚಿಂತಾಮಣಿ ನಗರಸಭೆ ಸದಸ್ಯ ಅಗ್ರಹಾರ ಮುರಳಿ ಅವರ ಮೇಲೆ ಶನಿವಾರ ನಡೆದಿರುವ ಮಾರಣಾಂತಿಕ ಹಲ್ಲೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬುಧವಾರ ಚಿಂತಾಮಣಿ ಬಂದ್‌ಗೆ (Chintamani Bundh) ಕರೆ ನೀಡಿದೆ. ಈ ಕುರಿತು ಪತ್ರಕರ್ತರ ಭವನದಲ್ಲಿ ಸೋಮವಾರ ಒಕ್ಕೂಟದ ಮುಖಂಡರು ಪತ್ರಿಕಾಗೋಷ್ಠಿ (Press Meet) ನಡೆಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತಾನಾಡಿದ ಮುಖಂಡ ವಿಜಯನರಸಿಂಹ “ಬಹಿರಂಗವಾಗಿ ‘ನಗರದ ಜನನಿಬಿಡ ಪ್ರದೇಶದಲ್ಲಿ ಮಚ್ಚು, ಲಾಂಗ್‌ನಿಂದ ಹಲ್ಲೆ ಮಾಡಿರುವುದು ಖಂಡನೀಯ. ಇದು ಮನುಷ್ಯತ್ವ, ಮಾನವೀಯತೆ ಇಲ್ಲದ ರಾಕ್ಷಸೀ ಕೃತ್ಯವಾಗಿದೆ. ಬಲಾಡ್ಯರು, ರಾಜಕೀಯ ಪ್ರಭಾವಿಗಳು ದಲಿತರನ್ನು ಕಗ್ಗೊಲೆ ಮಾಡುವ ಷಡ್ಯಂತ್ರವನ್ನು ಕೂಡಲೇ ನಿಲ್ಲಿಸಬೇಕು. ದಲಿತ ಸಮುದಾಯದ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆಗಳು ನಡೆಯುತ್ತಿವೆ. ಮುರಳಿ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಕುರಿತು ಸಮಗ್ರವಾದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧವೂ ಹೋರಾಟ ನಡೆಸುತ್ತೇವೆ” ಎಂದರು.
ಸುದ್ಧಿಗೋಷ್ಠಿಯಲ್ಲಿ ಸಂಘಟನೆಗಳ ಮುಖಂಡರಾದ ಜಿ.ನಾರಾಯಣಸ್ವಾಮಿ, ಕವಾಲಿ ವೆಂಕಟರವಣಪ್ಪ, ಮಹೇಶ್ ಬೈ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.