Chintamani : ಚಿಂತಾಮಣಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸೋಮವಾರ ಚಿಂತಾಮಣಿ ನಗರದಲ್ಲಿ ಛತ್ರಪತಿ ಶಿವಾಜಿ ಜಯಂತಿ (Chhatrapati Shivaji Maharaj Jayanti) ಆಚರಿಸಲಾಯಿತು. ಶಿವಾಜಿ ಜಯಂತಿ ಅಂಗವಾಗಿ ನಗರದ ಪ್ರವಾಸಿ ಮಂದಿರದಿಂದ ಜೋಡಿ ರಸ್ತೆ, ಗಜಾನನ ವೃತ್ತ, ಎಂ.ಜಿ.ರಸ್ತೆ, ಚೇಳೂರು ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಶಿವಾಜಿ ಮಹಾರಾಜರ ಸ್ತಬ್ದ ಚಿತ್ರದ ಮೆರೆವಣಿಗೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಆರ್.ರಾಜೇಂದ್ರ “ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಓದಿ, ಅವರ ಧೈರ್ಯ, ಸಾಹಸ ಹಾಗೂ ದೇಶಭಕ್ತಿ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ತಂದೆ–ತಾಯಿ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದಕ್ಕೆ ಶಿವಾಜಿ ತಾಯಿ ಮಾದರಿಯಾಗಿದ್ದು ರಾಷ್ಟ್ರವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಲು ಅವರು ತೋರಿದ ಶೌರ್ಯ, ಸಾಹಸ ಸಮಾಜಕ್ಕೆ ಸ್ಫೂರ್ತಿ” ಎಂದರು.
ಮೆರವಣಿಗೆಯಲ್ಲಿ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಮುಖಂಡರಾದ ಜಿ.ಎನ್.ವೇಣುಗೋಪಾಲ್, ಸತ್ಯನಾರಾಯಣರೆಡ್ಡಿ, ಅರುಣಬಾಬು, ಎಂ.ಆರ್.ಬಾಬು, ನಗರಸಭೆ ನಾಮನಿರ್ದೇಶಿತ ಸದಸ್ಯ ಟಿ.ಎಸ್.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.