Chintamani : 2025-26ನೇ ಸಾಲಿಗೆ ₹57 ಲಕ್ಷ ಉಳಿತಾಯ ಬಜೆಟ್ ಅನ್ನು ಮಂಗಳವಾರ ನಡೆದ ನಗರಸಭೆಯ ಸಭೆಯಲ್ಲಿ (CMC Budget) ಮಂಡಿಸಲಾಗಿದ್ದು, ಸದಸ್ಯರು ಅನುಮೋದನೆ ನೀಡಿದ್ದಾರೆ. ಈ ಬಾರಿ ನಗರಸಭೆ ₹89.27 ಕೋಟಿ ಆದಾಯ ಮತ್ತು ₹88.70 ಕೋಟಿ ಖರ್ಚು ಮಾಡುವ ನಿರೀಕ್ಷೆ ಹೊಂದಿದೆ.
ನಗರಸಭೆಗೆ ಪ್ರಮುಖ ಅನುದಾನಗಳಾದ 15ನೇ ಹಣಕಾಸು ಅನುದಾನ ₹6 ಕೋಟಿ, ಕುಡಿಯುವ ನೀರಿನ ಅನುದಾನ ₹30 ಲಕ್ಷ, ನಲ್ಮ್ ಅನುದಾನ ₹20 ಲಕ್ಷ, ಸ್ವಚ್ಛ ಭಾರತ್ ಮಿಷನ್ ಅನುದಾನ ₹2 ಕೋಟಿ, ಡಲ್ಟ್ ಅನುದಾನ ₹24 ಕೋಟಿ, ಯುಐಡಿಎಫ್ ಅನುದಾನ ₹3.60 ಕೋಟಿ, ಐಎನ್‌ಡಿ ಅನುದಾನ ₹4 ಕೋಟಿ, ಕೆಯುಐಡಿಎಸ್‌ಸಿ ಸಾಲ ₹15.76 ಕೋಟಿ ನಿರೀಕ್ಷಿಸಲಾಗಿದೆ.
ನಗರಸಭೆಗೆ ಪ್ರಮುಖ ಆದಾಯ ಮೂಲಗಳು ಆಸ್ತಿ ತೆರಿಗೆ ₹10 ಕೋಟಿ, ನೀರಿನ ತೆರಿಗೆ ₹2.10 ಕೋಟಿ, ಶೌಚಾಲಯ ಮತ್ತು ಪೆಟ್ರೋಲ್ ಬಂಕ್‌ಗಳ ನೆಲ ಬಾಡಿಗೆ ₹1.50 ಕೋಟಿ, ಬಾಡಿಗೆ ಮಳಿಗೆಗಳಿಂದ ₹2.80 ಕೋಟಿ, ಉದ್ಯಮಗಳ ಪರವಾನಗಿ ಶುಲ್ಕ ₹20 ಲಕ್ಷ ಸೇರಿವೆ.
ನಗರಸಭೆ ವೆಚ್ಚದಲ್ಲಿ ಸಿಬ್ಬಂದಿ ವೇತನ ₹5 ಕೋಟಿ, ನೌಕರರ ಕ್ಷೇಮಾಭಿವೃದ್ಧಿಗೆ ₹35 ಲಕ್ಷ, ಬೀದಿ ದೀಪಗಳ ನಿರ್ವಹಣೆಗೆ ₹40 ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಗೆ ₹1.20 ಕೋಟಿ, ಕುಡಿಯುವ ನೀರಿನ ನಿರ್ವಹಣೆಗೆ ₹3.70 ಕೋಟಿ, ಒಳಚರಂಡಿ ವ್ಯವಸ್ಥೆಗೆ ₹45 ಲಕ್ಷ ಮೀಸಲಾಗಿವೆ.
ಅಭಿವೃದ್ಧಿ ಕಾಮಗಾರಿಗಳಲ್ಲಿ ನಗರ ರಸ್ತೆಗಳ ಡಾಂಬರೀಕರಣಕ್ಕೆ ₹9 ಕೋಟಿ, ಚರಂಡಿ ನಿರ್ಮಾಣಕ್ಕೆ ₹2 ಕೋಟಿ, ಬೀದಿ ದೀಪ ಮತ್ತು ಕೇಬಲ್ ಬದಲಾವಣೆಗೆ ₹40 ಲಕ್ಷ, ಮಳೆ ನೀರು ಹರಿಯಲು ಸೇತುವೆ ನಿರ್ಮಾಣಕ್ಕೆ ₹2.20 ಕೋಟಿ, ಹೊಸ ಕೊಳವೆಬಾವಿ ಹಾಗೂ ಪೈಪ್‌ಲೈನ್ ಕಾಮಗಾರಿಗೆ ₹3.55 ಕೋಟಿ, ಪಾರ್ಕ್ ಅಭಿವೃದ್ಧಿಗೆ ₹50 ಲಕ್ಷ ವೆಚ್ಚ ನಿರೀಕ್ಷಿಸಲಾಗಿದೆ.
ಬಜೆಟ್ ಮಂಡನೆಯ ಸಂದರ್ಭದಲ್ಲಿ ಪೌರಾಯುಕ್ತ ಜಿ.ಎನ್.ಚಲಪತಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಉಪಾಧ್ಯಕ್ಷೆ ಕೆ.ರಾಣಿಯಮ್ಮ, ನಗರಸಭೆ ಸದಸ್ಯರು ಮಹ್ಮದ್ ಶಫೀಕ್, ರೆಡ್ಡಪ್ಪ, ಅಕ್ಷಯ್ ಕುಮಾರ್, ನಟರಾಜ್ ಮತ್ತು ಇತರರು ಉಪಸ್ಥಿತರಿದ್ದರು.