Chintamani : ಚಿಂತಾಮಣಿ ನಗರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ತಹಶೀಲ್ದಾರ್ ನೇತೃತ್ವದಲ್ಲಿ ರೈತರ ಕುಂದುಕೊರತೆಗಳ ಸಭೆ ನಡೆಯಿತು. ಸಭೆಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಹಲಾವಾರು ರೈತರು ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಜೆ.ವಿ. ರಘುನಾಥರೆಡ್ಡಿ ” ತಹಶೀಲ್ದಾರ್ ಕಚೇರಿ, ಸರ್ವೆ, ಕಂದಾಯ ದಾಖಲೆಗಳ ವಿಭಾಗ ಸೇರಿದಂತೆ ಹಲವು ವಿಭಾಗಗಳಿಗೆ ಹಾಗೆಯೇ ಪವತಿ ಖಾತೆ, ಇ-ಖಾತೆ, ದುರಸ್ತಿ, ಜಮೀನು ಸರ್ವೆ ಅರ್ಜಿ ಕುರಿತು ವರ್ಷಾನುಗಟ್ಟಲೇ ಅನೇಕ ರೈತರು ಅಲೆದು ಸುಸ್ತಾಗಿ ಏನಾದರೂ ಆಗಲಿ ಎಂದು ಸುಮ್ಮನಾಗುತ್ತಾರೆ. ಇದರಿಂದ ಬೇಸತ್ತು ಮಧ್ಯವರ್ತಿಗಳ ಮೂಲಕ ಹೋದರೆ ಕೆಲಸವಾಗುತ್ತದೆ ಎಂದು ಸಾರ್ವಜನಿಕರು ಅವರ ಮೊರೆ ಹೋಗುತ್ತಾರೆ” ಎಂದು ತಿಳಿಸಿದರು.
ತಹಶೀಲ್ದಾರ್ ಡಿ. ಹನುಮಂತರಾಯಪ್ಪ ಮಾತನಾಡಿ, ತಾಲ್ಲೂಕು ಕಚೇರಿಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆಗಳು ಸೇರಿ ಸ್ಥಳೀಯ ಹಂತದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಲಾಗುವುದು. ರೈತರು ಎದುರಿಸುತ್ತಿರುವ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಟ್ಟು, ಶೀಘ್ರವಾಗಿ ಬಗೆಹರಿಸುವಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟರಾಮಯ್ಯ, ಸಂಘದ ಮುಖಂಡರಾದ ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ, ನಾರಾಯಣಗೌಡ, ಮುನಿಯಪ್ಪ ಉಪಸ್ಥಿತರಿದ್ದರು.