Chintamani : ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಉಪ್ಪುಕುಂಟೆ ಗ್ರಾಮದ ಗಂಗುಲಮ್ಮ (70) ಎಂಬ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯತೆಯಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಆಸ್ಪತ್ರೆ ಎದುರು ಶುಶ್ರುಷಕಿಯರ ವಿರುದ್ಧ ಪ್ರತಿಭಟನೆ ನಡೆಸಿದರು.
ಉಸಿರಾಟದ ತೊಂದರೆ ಕಾರಣಕ್ಕಾಗಿ ಶನಿವಾರ ರಾತ್ರಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯೆ ಡಾ.ವಾಣಿ ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದರು. ರೋಗಿಯು ಉಸಿರಾಟದ ತೊಂದರೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅನೇಕ ಬಾರಿ ಹೋಗಿ ಕರೆದರೂ ಶುಶ್ರೂಷಕಿ ವಾರ್ಡ್‌ಗೆ ಬಂದು ವೈದ್ಯರು ಹೇಳಿದ್ದ ಚುಚ್ಚುಮದ್ದು ನೀಡಿಲ್ಲ. ಬೆಳಗಿನ ಜಾವ 4 ಗಂಟೆಗೆ ಬಾಗಿಲನ್ನು ತೆರೆದರೂ ರೋಗಿಯ ಬಳಿ ಬಾರದೆ, ಕರ್ತವ್ಯನಿರತ ವೈದ್ಯರ ಬಳಿಗೆ ತೆರಳಿ ಅವರನ್ನು ವಾರ್ಡ್‌ಗೆ ಕರೆತಂದರು ಆಗ ವೈದ್ಯರು ರೋಗಿಯನ್ನು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಕರ್ತವ್ಯದಲ್ಲಿದ್ದ ಶುಶ್ರೂಷಕಿಯರ ಕರ್ತವ್ಯಲೋಪ, ನಿರ್ಲಕ್ಷ್ಯದಿಂದಲೇ ಮೃತಪಟ್ಟಿದ್ದಾರೆ’ ಎಂದು ಮಹಿಳೆಯ ಸಂಬಂಧಿಕರು ಆರೋಪಿಸಿದರು.
ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್ ಮೃತರ ಸಂಬಂಧಿಕರೊಂದಿಗೆ ಮಾತುಕತೆ ನಡೆಸಿ, ದೂರನ್ನು ಸ್ವೀಕರಿಸಿ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಶುಶ್ರೂಷಕಿಯರ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಾಗಿ ಮೃತರ ಸಂಬಂಧಿಕರಿಗೆ ಭರವಸೆ ನೀಡಿದರು.