Chintamani : ಚಿಂತಾಮಣಿ ತಾಲೂಕಿನ ಕೋಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆಯ ಕೆ.ರಗುಟ್ಟಹಳ್ಳಿಯಲ್ಲಿರುವ (K.Raguttahalli) ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ (Pre-Matric Boys Hostel) ಬುಧವಾರ ಬೆಳಗ್ಗೆ ಉಪಾಹಾರ ಸೇವಿಸಿದ 26 ವಿದ್ಯಾರ್ಥಿಗಳು ಏಕಾಏಕಿ ಅಸ್ವಸ್ಥಗೊಂಡ (illness) ಘಟನೆ ನಡೆದಿದೆ.
ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಸ್‌ಎಲ್‌ಎನ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿ ತಂಗಿದ್ದಾರೆ. ಹಿಂದಿನ ರಾತ್ರಿ, ಮಕ್ಕಳು ಕೋಳಿ ಮಾಂಸದ ಭೋಜನವನ್ನು ಸೇವಿಸಿದ್ದು ಯಾವುದೇ ಸಮಸ್ಯೆ ಕಂಡು ಬಂದಿಲ್ಲ.ಮರುದಿನ ಬೆಳಿಗ್ಗೆ, ಎಂದಿನಂತೆ ಇಡ್ಲಿ ಮತ್ತು ಸಾಂಬಾರ್ ಉಪಹಾರವನ್ನು ಅವರಿಗೆ ನೀಡಿದಾಗ, ಅವರಲ್ಲಿ ಹಲವರು ಹೊಟ್ಟೆ ನೋವು ಮತ್ತು ವಾಂತಿಯ ಬಗ್ಗೆ ಸಿಬ್ಬಂದಿಗೆ ತ್ವರಿತವಾಗಿ ದೂರು ನೀಡಿದರು.
ತಕ್ಷಣವೇ ವಿದ್ಯಾರ್ಥಿಗಳಿಗೆ ಶಿಕ್ಷಕರು ORS ನೀಡಿದ ನಂತರ ಅವರಲ್ಲಿ ಕೆಲವರು ಚೇತರಿಸಿಕೊಂಡಿದ್ದಾರೆ. ಆದರೆ ಪರಿಸ್ಥಿತಿಯ ತೀವ್ರತೆಯಿಂದಾಗಿ 19 ವಿದ್ಯಾರ್ಥಿಗಳನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ವೈದ್ಯರು ವಿದ್ಯಾರ್ಥಿಗಳಲ್ಲಿ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದು ಅವರು ಸೇವಿಸಿದ ಆಹಾರದಲ್ಲಿನ ವ್ಯತ್ಯಾಸದಿಂದ ಸಮಸ್ಯೆ ಉಂಟಾಗಿರಬಹುದು ಎಂಬ ಶಂಕೆ ವ್ಯಕ್ತ ಪಡಿಸಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯೆಯಾಗಿ, ಸಮಗ್ರ ತನಿಖೆ ಅಗತ್ಯವೆಂದು ಪರಿಗಣಿಸಿ ಮುನ್ನೆಚ್ಚರಿಕೆಯಾಗಿ ವಸತಿ ನಿಲಯದ ಜವಾಬ್ದಾರಿ ಹೊತ್ತಿದ್ದ ಮೇಲ್ವಿಚಾರಕಿ ನಾಗವೇಣಿ ಅವರನ್ನು ತಾತ್ಕಾಲಿಕವಾಗಿ ವರ್ಗಾವಣೆ ಮಾಡಲಾಗಿದ್ದು ಆ ಜಾಗಕ್ಕೆ ಪ್ರಭಾರವನ್ನು ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ ನಿಟ್ಟಾಲಿ ಅವರು ನಿರ್ದೇಶನ ನೀಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದ ರೆಡ್ಡಿ ಮಾತನಾಡಿ, ಎಲ್ಲಾ ಸಂತ್ರಸ್ತ ವಿದ್ಯಾರ್ಥಿಗಳು ವೈದ್ಯಕೀಯ ಚಿಕಿತ್ಸೆ ಪಡೆದು ಈಗ ಸ್ಥಿರವಾಗಿದ್ದಾರೆ. ತನಿಖೆ ಮುಗಿದ ಬಳಿಕ ಘಟನೆಗೆ ನಿಖರ ಕಾರಣ ತಿಳಿಯಲಿದೆ. ಸುಗಮ ಕಾರ್ಯಾಚರಣೆಗಾಗಿ ನಾಗವೇಣಿ ಅವರನ್ನು ತಾತ್ಕಾಲಿಕವಾಗಿ ವರ್ಗಾವಣೆ ಮಾಡಿದ್ದು, ದೊಡ್ಡಬೊಮ್ಮನಹಳ್ಳಿ ವಸತಿ ನಿಲಯದ ಮೇಲ್ವಿಚಾರಕಿ ಕೆ.ಎಚ್.ಮುನಿರತ್ನಮ್ಮ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಘಟನೆಯ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸುದರ್ಶನ ಯಾದವ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯರಾರೆಡ್ಡಿ, ಎಎಸ್ಪಿ ಕುಶಾಲ ಚೌಕ್ಸೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ್ ಅವರನ್ನೊಳಗೊಂಡ ತಂಡ ಗ್ರಾಮ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು.