Kaiwara, Chintamani : ಕೈವಾರದ ಯೋಗಿನಾರೇಯಣ ಮಠದಲ್ಲಿ ಶುಕ್ರವಾರ ಕಾರ್ತಿಕ ಮಾಸದ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜೆ ಮತ್ತು ರಥೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಗರ್ಭಗುಡಿಯಲ್ಲಿರುವ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ಬೃಂದಾವನವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಪೂಜಾ ಸ್ಥಳವನ್ನು ಅಲಂಕರಿಸಿ, ಅಮರನಾರೇಯಣಸ್ವಾಮಿ, ಶ್ರೀದೇವಿ, ಭೂದೇವಿ ಹಾಗೂ ತಾತಯ್ಯನವರ ಉತ್ಸವ ಮೂರ್ತಿಗಳನ್ನು ಪೂಜೆಗೆ ಸಿದ್ಧಪಡಿಸಲಾಯಿತು.
ಉತ್ಸವ ಮೂರ್ತಿಗಳಿಗೆ ಪಂಚಾಮೃತ ಹಾಗೂ ಮಂಗಳ ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು. ಬಳಿಕ ಶಾಸ್ತ್ರೋಕ್ತ ಅಷ್ಟಾವಧಾನ ಸೇವೆ ಮತ್ತು ಮಹಾಮಂಗಳಾರತಿ ನಡೆಯಿತು. ತಾತಯ್ಯನವರ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತಲೂ ರಥೋತ್ಸವ ನಡೆಸಲಾಯಿತು. ನೂರಾರು ಭಕ್ತರು ರಥದೊಂದಿಗೆ ಭಾಗವಹಿಸಿ ಭಕ್ತಿಯನ್ನು ತೋರಿದರು.
ಹುಣ್ಣಿಮೆ ಪ್ರಯುಕ್ತ ನಾದಸುಧಾರಸ ವೇದಿಕೆಯಲ್ಲಿ ಅಖಂಡ ಸಂಕೀರ್ತನೆ, ಸಂಗೀತ, ಪ್ರವಚನಗಳು ನಡೆಯಿತು. ರಾತ್ರಿ ಭಜನೆ, ಕೀರ್ತನೆ, ತತ್ವಪದ ಗಾಯನ ಕಾರ್ಯಕ್ರಮಗಳು ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡಿದವು.
ಆಲಂಬಗಿರಿಯಲ್ಲಿ ಗಿರಿಪ್ರದಕ್ಷಿಣೆ:
ಆಲಂಬಗಿರಿ ದೇವಾಲಯದಿಂದ ಒಂದು ಕಿ.ಮೀ ದೂರವಿರುವ ಬೆಟ್ಟದ ಪ್ರಾಕೃತಿಕ ತಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀರ್ತನಾ ಗಿರಿಪ್ರದಕ್ಷಿಣೆ ನಡೆಯಿತು. ಧರ್ಮಾಧಿಕಾರಿ ಎಂ.ಆರ್. ಜಯರಾಂ ಮತ್ತು ಕೈವಾರ ಮಠದ ಟ್ರಸ್ಟಿಗಳ ಜೊತೆ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.