Chintamani : ನವಂಬರ್ 4 ರಂದು ತಾಲ್ಲೂಕಿನ ಉಪ್ಪಪೇಟೆ ಗ್ರಾಮ ಪಂಚಾಯಿತಿಯಿಂದ ಆರಂಭವಾದ ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹ ಅಭಿಯಾನ ನವಂಬರ್ 6 ರಂದು ಭಾನುವಾರ ನಗರದಲ್ಲಿ ಸಂಚರಿಸುವ ಮೂಲಕ ಮುಕ್ತಾಯಗೊಂಡಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport Bengaluru) ದಲ್ಲಿ ನಾಡಪ್ರಭು ಕೆಂಪೇಗೌಡ (Kempe Gowda I) ಅವರ 108 ಅಡಿ ಎತ್ತರದ ಕಂಚಿನ ಪ್ರತಿಮೆ (Statue of Prosperity) ಉದ್ಘಾಟನೆಯ ಅಂಗವಾಗಿ ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹ ಅಭಿಯಾನದ ಕೆಂಪೇಗೌಡ ರಥಯಾತ್ರೆ ಆರಂಭವಾಗಿತ್ತು.
“ತಾಲ್ಲೂಕಿನ ಜನತೆ ಹಾಗೂ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು ಕೆಂಪೇಗೌಡ ರಥಯಾತ್ರೆಗೆ ಸಹಕಾರ ನೀಡಿದ್ದು ಭಾನುವಾರ ತಾಲ್ಲೂಕಿನ ಕಾಗತಿ, ಊಲವಾಡಿ, ದೊಡ್ಡಗಂಜೂರು, ಆನೂರು, ಕುರುಬೂರು, ಮುನುಗನಹಳ್ಳಿ, ಚಿನ್ನಸಂದ್ರ, ಎಚ್.ಕೆ.ಹಳ್ಳಿ, ಪೆರಮಾಚನಹಳ್ಳಿ, ತಳಗವಾರ, ಎಸ್.ಕೆ.ಹಳ್ಳಿ, ಮಸ್ತೇನಹಳ್ಳಿ, ಕೈವಾರ ಪಂಚಾಯಿತಿಗಳಲ್ಲಿ ಸಂಚರಿಸಿ ಚಿಂತಾಮಣಿ ನಗರಕ್ಕೆ ಪ್ರವೇಶ ಮಾಡಿತು” ಎಂದು ತಹಶೀಲ್ದಾರ್ ಮುನಿಶಾಮಿರೆಡ್ಡಿ ತಿಳಿಸಿದರು.
ಬಿಜೆಪಿ ಮುಖಂಡರಾದ ಸತ್ಯನಾರಾಯಣರೆಡ್ಡಿ, ಎಂ.ಆರ್.ಬಾಬು, ಬ್ಯಾಲಹಳ್ಳಿ ಆಂಜನೇಯರೆಡ್ಡಿ, ಕುರುಟಹಳ್ಳಿ ಮಂಜುನಾಥ್, ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಗಳ ಸ್ತ್ರೀಶಕ್ತಿ ಸಂಘಗಳ ಸದಸ್ಯರು, ವಿವಿಧ ಸಂಘಟನೆಳ ಮಹಿಳಾ ಘಟಕಗಳ ಮಹಿಳೆಯರು ಪೂರ್ಣ ಕುಂಬ ಕಳಸಗಳೊಂದಿಗೆ ಸ್ವಾಗತಿಸಿದರು. ಆಯಾ ಗ್ರಾಮ ಪಂಚಾಯಿತಿಳಿಂದ ಸಂಗ್ರಹಿಸಿದ್ದ ಮಣ್ಣು ಮತ್ತು ರಥಯಾತ್ರೆ ವಾಹನಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಣ್ಣನ್ನು ರಥಕ್ಕೆ ಹಸ್ತಾಂತರಿಸಲಾಗುತ್ತಿತ್ತು. ಆಯಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಗ್ರಾಮಸ್ಥರು ಹಾಜರಿದ್ದು, ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ರಥವನ್ನು ಬೀಳ್ಕೊಡುತ್ತಿದ್ದರು.