Chintamani : ಚಿಂತಾಮಣಿ ಎಂ.ಜಿ. ರಸ್ತೆಯಲ್ಲಿರುವ ಆದರ್ಶ ಚಿತ್ರ ಮಂದಿರದ ಬಳಿ ಬುಧವಾರ KSRTC ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಬುರುಡಗುಂಟೆ ಸಮೀಪದ ಕೊಮ್ಮಸಂದ್ರ ಗ್ರಾಮದ ವೆಂಕಟೇಶಪ್ಪ (40) ಮತ್ತು ಅವರ ಪತ್ನಿ ಸರಸ್ವತಮ್ಮ (35) ಮೃತ ದಂಪತಿಗಳಾಗಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಸ್ವತಮ್ಮ ಅವರ ತವರೂರಾದ ನಾರಾಯಣಹಳ್ಳಿಯಲ್ಲಿ ನಡೆದ ಇಡು-ಮುಡಿ ಕಟ್ಟುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದಂಪತಿಗಳು ದ್ವಿಚಕ್ರ ವಾಹನದಲ್ಲಿ ಕೊಮ್ಮಸಂದ್ರದಿಂದ ಹೊರಟಿದ್ದರು. ಈ ವೇಳೆ, ಅಂಗಡಿಯಿಂದ ಹೊರತೆಗೆಯಲಾಗುತ್ತಿದ್ದ ಮತ್ತೊಂದು ಬೈಕ್ ಅವರ ವಾಹನಕ್ಕೆ ತಾಗಿ, ಗಂಡ-ಹೆಂಡತಿ ಬೈಕ್‌ನಿಂದ ಕೆಳಗೆ ಬಿದ್ದರು. ಆಗ ಶಿಡ್ಲಘಟ್ಟ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಅವರ ಮೇಲೆ ಹಾದುಹೋಗಿದೆ, ಪರಿಣಾಮವಾಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಿಂದಾಗಿ ನೂರಾರು ಜನ ಸ್ಥಳದಲ್ಲಿ ಜಮಾವಣೆಗೊಂಡರು, ಇದರಿಂದಾಗಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಡಿವೈಎಸ್‌ಪಿ ಪಿ. ಮುರಳೀಧರ್ ಮತ್ತು ಇನ್‌ಸ್ಪೆಕ್ಟರ್ ವಿಜಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾರ್ವಜನಿಕರು ರಸ್ತೆ ಕಿರಿದಾಗಿದೆ, ಪಾದಚಾರಿ ಮಾರ್ಗವನ್ನು ಅಂಗಡಿಗಳು ಆಕ್ರಮಣ ಮಾಡಿವೆ ಎಂಬ ಕಾರಣಗಳಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 10-12 ವರ್ಷಗಳಿಂದ ರಸ್ತೆ ವಿಸ್ತರಣೆ ಕಾಮಗಾರಿ ನನೆಗುದಿಗೆ ಬಿದ್ದಿರುವುದರ ವಿರುದ್ಧವೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.