Chintamani : ಭಾನುವಾರ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯಲ್ಲಿನ ವೀರಾಂಜನೇಯ ಬ್ರಹ್ಮರಥೋತ್ಸವವು (Sri Veera Anjaneyaswamy Temple, Kurutahalli) (Rathostava) ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಕಲಶಾರಾಧನೆ, ಅಭಿಷೇಕ, ಹೋಮ, ಅಷ್ಟಾವಧಾನ ಸೇವೆ, ಪೂರ್ಣಾಹುತಿ, ಬಲಿಹರಣ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ದೇವಾಲಯದಲ್ಲಿ ವೀರಾಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಮತ್ತು ಪೂಜೆ ಏರ್ಪಡಿಸಲಾಗಿತ್ತು.
ಶ್ರೀರಾಮಚಂದ್ರ ಸಮೇತ ಹನುಮಂತನ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮಧ್ಯಾಹ್ನ 1.30ಕ್ಕೆ ಶಾಸ್ತ್ರೋಕ್ತವಾಗಿ ಕರೆತಂದು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ರಥೋತ್ಸವಕ್ಕೆ ಕೈವಾರ ಕ್ಷೇತ್ರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ, ಬಸವಮಠದ ಮಹದೇವಸ್ವಾಮಿ ಹಾಗೂ ದೇವಾಲಯದ ಧರ್ಮದರ್ಶಿಗಳು ಚಾಲನೆ ನೀಡಿದರು.
ದಾಸಸಾಹಿತ್ಯ ಪರಿಷತ್, ಜಾನಪದ ಹುಂಜ ಮುನಿರೆಡ್ಡಿ ಜಾನಪದ ಕಾರ್ಯಕ್ರಮ, ಗ್ರಾಮದ ಅಂಬೇಡ್ಕರ್ ಯುವಕ ಸಂಘದಿಂದ ಚಕ್ಕಲ ಭಜನೆ, ಮದನಪಲ್ಲಿ ತಂಡದಿಂದ ಸೀತಾರಾಮ ಕುಲುಕು ಚಕ್ಕಲ ಭಜನೆ, ಗ್ರಾಮದ ಮಹಿಳೆಯರಿಂದ ದೀಪಗಳ ಸಮರ್ಪಣೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡೊಳ್ಳುಕುಣಿತ, ವೀರಗಾಸೆ, ಜಾಲಹಳ್ಳಿ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಸಿಂಗಾರಿ ಮೇಳ(ಚಂಡಿ ವಾದ್ಯ) ಸಾಂಸ್ಕೃತಿಕ ಕಾರ್ಯಕ್ರಮಗಳು ರಥೋತ್ಸವಕ್ಕೆ ಮೆರಗು ನೀಡಿದವು. ರಾತ್ರಿ ಮದನಪಲ್ಲಿಯ ಪಾಶಂವಾರಿಪಲ್ಲಿ ಸಿದ್ದೇಶ್ವರ ನಾಟಕ ಮಂಡಳಿಯಿಂದ ಸತ್ಯಹರಿಶ್ಚಂದ್ರ ನಾಟಕ ಏರ್ಪಡಿಸಲಾಗಿತ್ತು.