Chintamani : ಖಾಸಗಿ ಬಸ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದ ಇಬ್ಬರು ಸಜೀವವಾಗಿ ದಹನವಾಗಿರುವ ಘಟನೆ ಚಿಂತಾಮಣಿ–ಮದನಪಲ್ಲಿ (Chintamani Madanapalle Road) ರಸ್ತೆಯ ಗೋಪಲ್ಲಿ ಗೇಟ್ (Gopalli Gate) ಬಳಿ ಭಾನುವಾರ (Bus Car Accident) ನಡೆದಿದೆ.
ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ಖಾಸಗಿ ಬಸ್ ಮತ್ತೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಬಸ್ ಎದುರಿಗೆ ಕಡಪದಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಾಗ ಎರಡೂ ವಾಹನಗಳು ರಸ್ತೆ ಬದಿಗೆ ಮಗುಚಿ ಬಿದ್ದವು. ಈ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಆಗ ಕಾರಿನಲ್ಲಿದ್ದ ಬೆಂಗಳೂರಿನ ಮಹದೇವಪುರದಲ್ಲಿ ವಾಸವಿರುವ ಆಂಧ್ರಪ್ರದೇಶದ ಕಡಪ ಮೂಲದ ಧನಂಜಯ ರೆಡ್ಡಿ (31) ಮತ್ತು ಕಲಾವತಿ (50) ಮೃತಪಟ್ಟಿದ್ದಾರೆ. ಮಹಾಲಕ್ಷ್ಮಿ (60), ಶೋಭಾ (28) ಮತ್ತು ಮೂರು ವರ್ಷದ ಮನ್ವಿತ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಮತ್ತು ಪೊಲೀಸರು ಬೆಂಕಿ ನಂದಿಸಿದರು. ಜಿಲ್ಲಾ ಎಸ್‌ಪಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಎಸ್‌ಪಿ ರೆಜಾ ಇಮಾಮ್ ಖಾಸಿಂ, ಡಿವೈಎಸ್‌ಪಿ ಮುರಳೀಧರ್ ಸ್ಥಳಕ್ಕೆ ಭೇಟಿ ನೀಡಿದ್ದರು.