Chintamani : ಕಾರಿನ ಟೈರ್ ಸ್ಫೋಟಗೊಂಡು ಚಾಲಕನ ಹಿಡಿತ ತಪ್ಪಿ ಕಾರು ಪಲ್ಟಿಯಾಗಿ (Car Accident) ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಗುರುವಾರ ಚಿಂತಾಮಣಿ–ಮುರುಗಮಲ್ಲ (Murugamalla) ರಸ್ತೆಯ ಕಾಗತಿ ಮತ್ತು ಕೊಂಗತಿಮ್ಮನಹಳ್ಳಿ ಮಧ್ಯೆ ನಡೆದಿದೆ.
ಮೃತರನ್ನು ಬೆಂಗಳೂರಿನ ಗುರ್ರಪ್ಪನಪಾಳ್ಯದ ನಿವಾಸಿಗಳಾದ ವಾಹಿದ್ (60), ಅವರ ಮಗ ಸಕ್ಲೇನ್ (30), ಸರ್ದಾರ್ (50) ಎಂದು ಗುರುತಿಸಲಾಗಿದ್ದು ಘಟನೆಯಲ್ಲಿ ನಗೀನಾ (45), ಶೋಯೆಬ್ (30) ಹಾಗೂ ಅಮರೀನ್ (25) ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಅಸನೀಮ್ (3) ಮತ್ತು ಮರಿಯಮ್ (2) ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಗಾಯಾಳುಗಳಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಡಿವೈಎಸ್‌ಪಿ ಪಿ.ಮುರಳೀಧರ್, ಗ್ರಾಮಾಂತರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಶಿವರಾಜ್ ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.