Chikkaballapur : ಚಿಂತಾಮಣಿ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ (Krishi vigyan kendra Chintamani) ಶುಕ್ರವಾರ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಹಾಗೂ ಕೃಷಿ ರಾಸಾಯನಶಾಸ್ತ್ರ ಮತ್ತು ಮಣ್ಣು ವಿಜ್ಞಾನ ವಿಭಾಗ ಜಿಕೆವಿಕೆ ಬೆಂಗಳೂರು ಸಹಯೋಗದೊಂದಿಗೆ “ತರಕಾರಿ ಬೆಳೆಗಳಲ್ಲಿ ಸಾವಯವ ಹಾಗೂ ರಾಸಾಯನಿಕ ಗೊಬ್ಬರ ಬಳಕೆ” (Organic Manure) ಕುರಿತು ತಾಂತ್ರಿಕ ಅಧಿವೇಶನದ ಮೂಲಕ ತರಬೇತಿ (Training) ಕಾರ್ಯಕ್ರಮ ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಕೇಂದ್ರದ ಮುಖ್ಯಸ್ಥ ಎಂ.ಪಾಪಿರೆಡ್ಡಿ , “ರೈತರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಇಳುವರಿ ಮತ್ತು ಲಾಭಕ್ಕೆ ರಾಸಾಯನಿಕ ಗೊಬ್ಬರದ ಮೊರೆ ಹೋಗಿದ್ದು ರಾಸಾಯನಿಕ ಗೊಬ್ಬರಗಳ ಅತಿ ಬಳಕೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಜತೆಗೆ ಮಣ್ಣಿನ ಫಲವತ್ತತೆ ನಾಶವಾಗಿ ಭೂಮಿ ಬೆಳೆಗೆ ನಿರುಪಯುಕ್ತವಾಗುತ್ತದೆ. ಪೂರ್ವಿಕರ ಕಾಲದಲ್ಲಿದ್ದಂತೆ ರೈತರು ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ ಸಾವಯವದ ಬಳಕೆ ಹೆಚ್ಚು ಮಾಡುವುದರಿಂದ ಇಳುವರಿ ಸ್ವಲ್ಪ ಕಡಿಮೆಯಾದರೂ ಜನರ ಆರೋಗ್ಯ ಮತ್ತು ಮಣ್ಣಿನ ಫಲವತ್ತತೆ ಉತ್ತಮವಾಗುತ್ತದೆ” ಎಂದು ತಿಳಿಸಿದರು.
ರೇಷ್ಮೆಕೃಷಿ ಮಹಾವಿದ್ಯಾಲಯ ಮುಖ್ಯಸ್ಥ ಪಿ.ವೆಂಕಟರವಣ, ನಿವೃತ್ತ ಪ್ರಾಧ್ಯಾಪಕ ಸಿ.ಎ. ಶ್ರೀನಿವಾಸಮೂರ್ತಿ, ಜಿಕೆವಿಕೆಯ ಬಿ.ಗಾಯಿತ್ರಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೆ.ಸಂಧ್ಯಾ, ಆರ್. ಪ್ರವೀಣಕುಮಾರ್, ವಿಶ್ವನಾಥ್, ಡಿ.ವಿ. ನವೀನ್ ಉಪಸ್ಥಿತರಿದ್ದರು.